ಅಬ್ಬರದ ಮಧ್ಯೆ ವಿವಾದಕ್ಕೆ ಸಿಲುಕಿದ ‘ಧುರಂಧರ್ 2’

ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿರುವ ‘ಧುರಂಧರ್ 2’ ಸಿನಿಮಾ ಇದೀಗ ವಿವಾದಕ್ಕೆ ಗುರಿಯಾಗಿದೆ. ಚಿತ್ರದಲ್ಲಿನ ಒಂದು ದೃಶ್ಯವು ಸಿಖ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುಂಬೈನ ಮುಲುಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಸಂಬಂಧ ಚಿತ್ರ ನಿರ್ಮಾಪಕರು ಹಾಗೂ ನಟ ಆರ್. ಮಾಧವನ್ ವಿರುದ್ಧ FIR ದಾಖಲಿಸಲು ಮನವಿ ಮಾಡಲಾಗಿದೆ. ಚಿತ್ರದಲ್ಲಿ ಸಿಖ್ ಸಂಪ್ರದಾಯಗಳನ್ನು ಅವಮಾನಿಸುವ ರೀತಿಯ ಚಿತ್ರಣ ನೀಡಲಾಗಿದೆ ಎಂಬುದು ದೂರಿನ ಮುಖ್ಯ ಆರೋಪವಾಗಿದೆ.

ದೂರಿನ ಪ್ರಕಾರ, ಒಂದು ನಿರ್ದಿಷ್ಟ ದೃಶ್ಯದಲ್ಲಿ ಗುರು ಗೋವಿಂದ್ ಸಿಂಗ್ ಅವರ ಬಗ್ಗೆ ಅಗೌರವ ತೋರಿಸಲಾಗಿದೆ ಎಂದು ಆರೋಪಿಸಲಾಗಿದೆ. ಇದರಿಂದ ಸಿಖ್ ಸಮುದಾಯದ ಸದಸ್ಯರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಶಿವಸೇನೆ ನಾಯಕ ಗುರ್ಜೀತ್ ಸಿಂಗ್ ಖೇರ್ ಈ ದೂರನ್ನು ಮುನ್ನಡೆಸಿದ್ದು, ಧಾರ್ಮಿಕ ನಂಬಿಕೆಗಳನ್ನು ಚಿತ್ರಿಸುವಾಗ ಹೆಚ್ಚಿನ ಸಂವೇದನಾಶೀಲತೆ ಅಗತ್ಯ ಎಂದು ಒತ್ತಿ ಹೇಳಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದು, ಆರ್. ಮಾಧವನ್ ಅಭಿನಯದ ಪಾತ್ರವನ್ನು ನಟ ರಣವೀರ್ ಸಿಂಗ್ ಜೊತೆ ಸಿಗರೇಟ್ ಸೇವಿಸುತ್ತಾ, ಗುರು ಗೋವಿಂದ್ ಸಿಂಗ್ ರಚನೆಯ ದಸಮ್ ಗ್ರಂಥ ಸಾಹಿಬ್‌ನ ಪವಿತ್ರ ಗುರ್ಬಾನಿ ‘ಸೂರ ಸೋ ಪೆಹ್ಚನಿಯೇ ಜೋ ಲಾಡೇ ದೀನ್ ಕೆ ಹೇತ್’ ಪಠಿಸುತ್ತಿರುವ ದೃಶ್ಯ ತೀವ್ರವಾಗಿ ನೋವುಂಟುಮಾಡಿದೆ ಎಂದು ಹೇಳಿದ್ದಾರೆ.

ಇಂತಹ ಚಿತ್ರಣವು ಧಾರ್ಮಿಕ ಭಾವನೆಗಳಿಗೆ ಅವಮಾನವಾಗಿದ್ದು, ಇದು ಸಂಪೂರ್ಣವಾಗಿ ಅಸ್ವೀಕಾರಾರ್ಹ ಎಂದು ಅವರು ಹೇಳಿದ್ದಾರೆ. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿನಿಮಾ ವಿರುದ್ಧ ಟೀಕೆಗಳು ಹೆಚ್ಚುತ್ತಿದ್ದು, ಹಲವು ವಲಯಗಳಿಂದ ವಿರೋಧ ವ್ಯಕ್ತವಾಗುತ್ತಿದೆ.

ವರದಿ : ಲಾವಣ್ಯ ಅನಿಗೋಳ

About The Author