ಕೋಲ್ಕತ್ತಾ: ಕೋಲ್ಕತ್ತಾದ ಆರ್.ಜಿ ಕಾರ್ ಆಸ್ಪತ್ರೆಯ ಟ್ರೈನಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ. ಇಂತಹ ಘೋರ ಘಟನೆಗಳನ್ನು ತಡೆಯಲು ಕಠಿಣ ಕಾನೂನು ರೂಪಿಸಬೇಕು ಎಂಬ ಒತ್ತಾಯಗಳು ಎಲ್ಲೆಡೆ ಕೇಳಿ ಬರುತ್ತಿದೆ. ಏತನ್ಮಧ್ಯೆ, ಪಶ್ಚಿಮ ಬಂಗಾಳ ಸರ್ಕಾರ ಇಂದಿನಿಂದ 2 ದಿನಗಳ ವಿಶೇಷ ಅಧಿವೇಶನ (Special Session) ಕರೆದಿದ್ದು, ಈ ವಿಶೇಷ ಅಧಿವೇಶನದಲ್ಲಿ ಅತ್ಯಾಚಾರ ಅಪರಾಧಿಗಳಿಗೆ 10 ದಿನದಲ್ಲಿ ಮರಣದಂಡನೆ ಶಿಕ್ಷೆ (Death Punishment For Rapists)ಯನ್ನು ವಿಧಿಸುವ ಮಸೂದೆಯನ್ನು ಮಂಡಿಸಲು ಮುಂದಾಗಿದೆ..
ಅತ್ಯಾಚಾರ ವಿರೋಧಿ ಮಸೂದೆಗೆ ಬಿಜೆಪಿ ಬೆಂಬಲ
ಮಂಗಳವಾರ ಪ್ರಸ್ತಾವಿತ ವಿಧೇಯಕ ಬಂಗಾಳ ವಿಧಾನಸಭೆಯಲ್ಲಿ ಮಂಡನೆಯಾಗಲಿದ್ದು, ಅತ್ಯಾಚಾರದ ವಿರುದ್ಧದ ಮಮತಾ ಸರ್ಕಾರದ ಈ ಮಸೂದೆಗೆ ಪ್ರತಿಪಕ್ಷ ಬಿಜೆಪಿ ಬೆಂಬಲ ವ್ಯಕ್ತಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಸುಕಾಂತ್ ಮಜುಂದಾರ್, ಬಂಗಾಳ ವಿಧಾನಸಭೆಯಲ್ಲಿ ಮಂಡಿನೆಯಾಗಲಿರೋ ಅತ್ಯಾಚಾರ ವಿರೋಧಿ ಮಸೂದೆಯನ್ನು ಭಾರತೀಯ ಜನತಾ ಪಕ್ಷ (BJP) ಬೆಂಬಲಿಸಲಿದೆ. ಅಲ್ಲದೆ, ರಾಜ್ಯದ ಮಹಿಳೆಯರ ಸುರಕ್ಷತೆಯ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ರಾಜೀನಾಮೆಗೆ ಒತ್ತಾಯಿಸಿ ವಿಧಾನಸಭೆಯೊಳಗೆ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.
ಅತ್ಯಾಚಾರಿಗಳಿಗೆ 10 ದಿನದಲ್ಲಿ ಮರಣದಂಡನೆ ಶಿಕ್ಷೆ!
ಕೆಲವು ದಿನಗಳ ಹಿಂದಷ್ಟೇ ಈ ಬಗ್ಗೆ ಮಾತನಾಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನಮ್ಮ ಸರ್ಕಾರ ಅತ್ಯಾಚಾರ ವಿರೋಧಿ ಕಾನೂನನ್ನು ಜಾರಿಗೆ ತರುತ್ತದೆ. ಈ ಮಸೂದೆ ಮೂಲಕ ಅತ್ಯಾಚಾರ ಆರೋಪಿಗಳಿಗೆ 10 ದಿನಗಳಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ದರು.
ಬಂಗಾಳದಲ್ಲಿ ತೀವ್ರ ಹೋರಾಟಗಳು, ಪ್ರತಿಭಟನೆಗಳು ನಡೆದ ಬಳಿಕ ಎಚ್ಚೆತ್ತುಕೊಂಡಿರುವ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಅತ್ಯಾಚಾರ ವಿರೋಧಿ ಕಠಿಣ ಕಾನೂನು ಜಾರಿಗೆ ತರಲು ಮುಂದಾಗಿದೆ. ಈ ಕಠಿಣ ಕಾನೂನು ಜಾರಿಯಾದ ಬಳಿಕವಾದರೂ ಬಂಗಾಳದಲ್ಲಿ ಅತ್ಯಾಚಾರ ಪ್ರಕರಣಗಳಿಗೆ ಬ್ರೇಕ್ ಬೀಳುತ್ತಾ ಎಂಬುದನ್ನ ಕಾದು ನೋಡಬೇಕಿದೆ..