ರಾಜ್ಯ ಸರ್ಕಾರದ ವಿರುದ್ಧ ವಿಕಲಚೇತನರಿಂದ ಬೀದಿ ಬದಿಯಲ್ಲಿ ಅಗ್ರಹ ವ್ಯಕ್ತವಾದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕರ್ನಾಟಕ ಅಂಗವಿಕಲ ರಾಜ್ಯ ಒಕ್ಕೂಟ (KARO) ಜಿಲ್ಲೆಯ ಘಟಕದ ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾ ಆಡಳಿತ ಭವನದ ಎದುರು ಗುರುವಾರ ಭಾರೀ ಪ್ರತಿಭಟನೆ ನಡೆಯಿತು. ಜಿಲ್ಲೆಯ ವಿಕಲಚೇತನರು ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಮೌನಧರಣೆಯಿಂದ ಹಿಡಿದು ಘೋಷಣೆಗಳವರೆಗೆ ಹೋರಾಟ ನಡೆಸಿದರು.
ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳೇನು ಅನ್ನೋದನ್ನಾ ನೋಡೋದಾದ್ರೆ- ವಿಕಲಚೇತನರ ಮಾಸಾಶನವನ್ನು ₹5,000ಕ್ಕೆ ಹೆಚ್ಚಿಸಬೇಕು, ಕರ್ನಾಟಕ ರಾಜ್ಯದಾದ್ಯಂತ ಉಚಿತ ಬಸ್ ಪಾಸ್ ವಿತರಣೆ ಮಾಡಬೇಕು, ವಿಕಲಚೇತನರಿಗೆ ವೈಯಕ್ತಿಕ 5% ಅನುದಾನ ಮೀಸಲು ಮಾಡಬೇಕು, ಸ್ಥಳೀಯ ಖಾಸಗಿ ಕಂಪನಿಗಳು ಮತ್ತು ಕೈಗಾರಿಕೆಗಳಲ್ಲಿ 5% ಉದ್ಯೋಗ ಮೀಸಲಾತಿ ಜಾರಿಗೆ ತರಬೇಕು, ವಿಕಲಚೇತನರ ಅನುದಾನದಲ್ಲಿ ನಡೆಯುತ್ತಿರುವ ದುಂದು ಪೊಲಾದವಿ ಹಾಗೂ ಅವ್ಯವಹಾರವನ್ನು ತಡೆಯಬೇಕು, ಸರಕಾರದ ಯೋಜನೆಗಳ ಕುರಿತು ಮಾಹಿತಿ ಕೊರತೆಯಿಂದ ವಿಕಲಚೇತನರು ವಂಚಿತರಾಗುತ್ತಿರುವುದನ್ನು ಸರಿಪಡಿಸಬೇಕು.
ಇನ್ನು ಜಿಲ್ಲಾಡಳಿತದ ಮಟ್ಟದಲ್ಲಿ ವಿಕಲಚೇತನರ ಕುಂದು–ಕೊರತೆ ಸಭೆಯನ್ನು ಬಹಳಕಾಲದಿಂದ ನಡೆಸಲಾಗದಿರುವುದನ್ನು ಆರೋಪಿಸಿ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಕ್ಷಣ ಸಭೆ ಕರೆಯುವಂತೆ ಮನವಿ ಸಲ್ಲಿಸಿದರು.ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟದ ಉಪಾಧ್ಯಕ್ಷರ ನೇತೃತ್ವದಲ್ಲಿ ಪದಾಧಿಕಾರಿಗಳು ತಮ್ಮ ಬೇಡಿಕೆಗಳ ಪಟ್ಟಿ ಹೊಂದಿದ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಒಪ್ಪಿಸಿದರು. ವಿಕಲಚೇತನರ ಹಿತಕ್ಕಾಗಿ ಈ ಬೇಡಿಕೆಗಳನ್ನು ಸರ್ಕಾರ ತ್ವರಿತವಾಗಿ ಪರಿಗಣಿಸಬೇಕು ಎಂಬುದು ಪ್ರತಿಭಟನಾಕಾರರ ಒತ್ತಾಯ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




