ಬೆಂಗಳೂರು: ಕರ್ನಾಟಕದಲ್ಲಿ ಮಾಸ್ಕ್ ಕಡ್ಡಾಯ ನಿಯಮ ರದ್ದು ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ, ತಜ್ಞರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ರಾಜ್ಯಗಳಲ್ಲಿ ಈಗಾಗಲೇ ಮಾಸ್ಕ್ ಕಡ್ಡಾಯ ರದ್ದು ಮಾಡಲಾಗಿದೆ. ವಿಶ್ವದಲ್ಲಿ ನಾಲ್ಕನೆ ಅಲೆ ಬಗ್ಗೆ ಚರ್ಚೆ ನಡೆಯುತ್ತಿದೆ. ನಮ್ಮಲ್ಲಿ ಶೇ.90ರಷ್ಟು ಜನ ಮಾಸ್ಕ್ ಹಾಕಿಕೊಳ್ತಿಲ್ಲ. ನಾವೂ ಕೂಡ ಮಾಸ್ಕ್ ಧರಿಸದವರ ಮೇಲೆ ಕೇಸ್ ಹಾಕುತ್ತಿಲ್ಲ ಎಂದರು.
ಮಾಸ್ಕ್ ರದ್ದು ಮಾಡಿರೋ ಬಗ್ಗೆ ನಾವೇನೂ ಆದೇಶ ಮಾಡಿಲ್ಲ. ಕರ್ನಾಟಕದಲ್ಲೂ ಮಾಸ್ಕ್ ಕಡ್ಡಾಯ ರದ್ದು ವಿಚಾರವಾಗಿ ಸಮಾಲೋಚನೆ ನಡೆಯುತ್ತಿದೆ. ಟಾಸ್ಕ್ ಫೋರ್ಸ್ ಮತ್ತು ಸಿಎಂ ಜೊತೆ ಚರ್ಚಿಸಿ ಸದ್ಯದಲ್ಲೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಓಮಿಕ್ರಾನ್ ಹೊಸತಳಿ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಈ ಬಗ್ಗೆ ನಾವು ತಜ್ಞರ ಸಂಪರ್ಕದಲ್ಲಿದ್ದೇವೆ. ಜಿನೋಮಿಕ್ ಸ್ವೀಕ್ವೆನ್ಸ್ ಟೆಸ್ಟ್ ಬಗ್ಗೆ ಐಸಿಎಂಆರ್ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಹಲಾಲ್ ಕಟ್ ಮಾಂಸ ನಿಷೇಧ ಅಭಿಯಾನ ಕುರಿತಂತೆ ಪ್ರತಿಕ್ರಿಯಿಸಿದಂತ ಅವರು, ಹಲಾಲ್ ಪ್ರಮಾಣಿಕರಿಸುವುದು ನಮ್ಮ ಇಲಾಖಾ ವ್ಯಾಪ್ತಿಗೆ ಬರುವುದಿಲ್ಲ. ಆರೋಗ್ಯ ಇಲಾಖೆ ವ್ಯಾಪ್ತಿಗೆ ಹಲಾಲ್ ಪ್ರಮಾಣಪತ್ರ ಕೊಡುವುದು ಬರುವುದಿಲ್ಲ. ನಾವು ಅ ರೀತಿ ಪ್ರಮಾಣಪತ್ರ ಕೊಡೋದಿಲ್ಲ. ನಾವು ಆಹಾರ ಗುಣಮಟ್ಟದ ಬಗ್ಗೆ ಮಾತ್ರ ಸರ್ಟಿಫಿಕೇಟ್ ಕೊಡುತ್ತೇವೆ. ಹಲಾಲ್ ಸರ್ಟಿಫಿಕೇಟ್ ಗೂ ನಮಗೂ ಸಂಬಂಧವಿಲ್ಲ ಎಂದು ಸ್ಪಷ್ಟ ಪಡಿಸಿದರು.




