ಬೆಂಗಳೂರು: ಅತೃಪ್ತ ಶಾಸಕರು ತಮ್ಮ ಅನರ್ಹತೆಗೆ ಕೂಡಲೇ ತಡೆ ತರುವುದಕ್ಕೆ ಸಿದ್ಧತೆ ನಡೆಸುತ್ತಿದ್ದು, ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲಿದ್ದಾರೆ.
ಕಾಂಗ್ರೆಸ್ ,ಜೆಡಿಎಸ್ ಪಕ್ಷದ 17 ಮಂದಿ ಶಾಸಕರನ್ನು ಅನರ್ಹತೆಗೊಳಿಸಿ ಸ್ಪೀಕರ್ ರಮೇಶ್ ಕುಮಾರ್ ಹೊರಡಿಸಿರುವ ಆದೇಶದಿಂದ ದಿಗ್ಭ್ರಾಂತಗೊಂಡಿರೋ ಅತೃಪ್ತರು ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಲು ರೆಡಿಯಾಗಿದ್ದಾರೆ. ರಾಜೀನಾಮೆ ಅಂಗೀಕಾರ ಮಾಡಲು ಸ್ಪೀಕರ್ ವಿಳಂಬ ಮಾಡ್ತಿದ್ದಾರೆ ಅಂತ ನೇರವಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಅತೃಪ್ತರಿಗೆ ಸ್ಪೀಕರ್ ಮರ್ಮಾಘಾತ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ 17 ಅನರ್ಹ ಶಾಸಕರು ಮತ್ತೆ ಸ್ಪೀಕರ್ ಆದೇಶ ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಲಿದ್ದಾರೆ.
ಇನ್ನು ತಮಗೂ, ಅತೃಪ್ತ ಶಾಸಕರಿಗೂ ಯಾವುದೇ ಸಂಬಂಧವಿಲ್ಲ, ರಾಜೀನಾಮೆ ನೀಡಿರೋದು ಅವರ ನಿರ್ಧಾರ ಅಂತ ಹೇಳಿಕೊಂಡು ತಿರುಗುತ್ತಿದ್ದ ಬಿಜೆಪಿ ನಾಯಕರು ಇದೀಗ ಸ್ಪೀಕರ್ ಆದೇಶಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಕಾಂಗ್ರೆಸ್-ಜೆಡಿಎಸ್ ನಾಯಕರ ಮನವಿ ಮೇರೆಗೆ ಸ್ಪೀಕರ್ 17 ಅತೃಪ್ತರನ್ನು ಅನರ್ಹಗೊಳಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಸಂವಿಧಾನದ ವಿರುದ್ಧ ವಾಗಿ ಸ್ಪೀಕರ್ ಕೆಲಸ ಮಾಡಿದ್ದು ಅವರಿಗೆ ಕೋರ್ಟ್ ನಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ ಅಂತ ಅನರ್ಹರ ಪರ ಬ್ಯಾಟಿಂಗ್ ಮಾಡಿದ್ದಾರೆ.