ಮೈಸೂರಿನ ಸಾಲಿಗ್ರಾಮ ತಾಲೂಕಿನ ಭಾಸ್ಕರ ದೇವಾಲಯದ ಬಳಿ ಸೋಮವಾರ ಸಂಭವಿಸಿದ ದಾರುಣ ಘಟನೆದಲ್ಲಿ ಮೂವರು ಬಾಲಕರು ನೀರುಪಾಲಾಗಿದ್ದಾರೆ. ಸಾಲಿಗ್ರಾಮ ಪಟ್ಟಣದ ಕೋಟೆ ಬೀದಿಯ ನಿವಾಸಿಗಳಾದ 16 ವರ್ಷದ ಅಯಾನ್, 13 ವರ್ಷದ ಆಜಾನ್ ಹಾಗೂ 14 ವರ್ಷದ ಲುಕ್ಮಾನ್ ಮೃತಪಟ್ಟಿದ್ದಾರೆ.
ಅಯಾನ್ ಮತ್ತು ಆಜಾನ್ ಕೆ.ಆರ್.ಪೇಟೆಯ ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ದೀಪಾವಳಿ ರಜೆಯ ನಿಮಿತ್ತ ಊರಿಗೆ ಬಂದಿದ್ದರು. ಸೋಮವಾರ ಮಧ್ಯಾಹ್ನ, ಸ್ಥಳೀಯ ಸ್ನೇಹಿತ ಲುಕ್ಮಾನ್ ಜೊತೆ ಭಾಸ್ಕರ ದೇವಾಲಯದ ಬಳಿ ಇರುವ ಚಾಮರಾಜ ಎಡೆ ದಂಡೆ ನಾಲೆಗೆ ಈಜಲು ಹೋದರು. ಈ ವೇಳೆ ನೀರಿನ ಪ್ರಬಲ ಹರಿವಿನಲ್ಲಿ ಮೂವರೂ ಕೊಚ್ಚಿಹೋಗಿದ್ದಾರೆ ಎನ್ನಲಾಗಿದೆ.
ಸಂಜೆಯಾದರೂ ಮಕ್ಕಳು ಮನೆಗೆ ಮರಳದಿದ್ದಾಗ ಪೋಷಕರು ಹುಡುಕಾಟ ಆರಂಭಿಸಿದರು. ನಾಲೆಯ ಬಳಿಯಲ್ಲಿ ಮಕ್ಕಳ ಬಟ್ಟೆ ಹಾಗೂ ಚಪ್ಪಲಿಗಳು ಕಂಡುಬಂದ ಹಿನ್ನೆಲೆಯಲ್ಲಿ ತಕ್ಷಣವೇ ಸಾಲಿಗ್ರಾಮ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಅಗ್ನಿಶಾಮಕ ಸಿಬ್ಬಂದಿಯ ನೆರವಿನಿಂದ ಶೋಧ ಕಾರ್ಯ ಕೈಗೊಂಡು, ಬಳಿಕ ಮೂವರ ಶವಗಳನ್ನು ಪತ್ತೆಹಚ್ಚಿದರು.
ಈ ಘಟನೆ ಕುರಿತು ಅಯಾನ್ ಮತ್ತು ಆಜಾನ್ ಅವರ ಸಹೋದರ ಶಕೀಲ್ ಅಹಮದ್ ನೀಡಿದ ದೂರು ಆಧಾರದ ಮೇಲೆ ಸಾಲಿಗ್ರಾಮ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಶವಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.
ಗಮನಾರ್ಹವೆಂದರೆ, ಇತ್ತೀಚೆಗೆ ವಿಜಯಪುರ ಜಿಲ್ಲೆಯ ಮಿಂಚನಾಳ ತಾಂಡಾದ ಮಾದೇವನಗರದಲ್ಲೂ ಇದೇ ರೀತಿಯ ಘಟನೆ ಸಂಭವಿಸಿತ್ತು. ಅಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳು ಮೃತಪಟ್ಟಿದ್ದರು. 8 ವರ್ಷದ ಶಿವಮ್ಮ ರಾಜೂ ರಾಠೋಡ್ , 7 ವರ್ಷದ ಕಾರ್ತಿಕ ವಿಶ್ವಾ ರಾಠೋಡ್ ಹಾಗೂ 12 ವರ್ಷದ ಸ್ವಪ್ನಾ ರಾಜೂ ರಾಠೋಡ್ ಮೃತ ಮಕ್ಕಳು. ಕುರಿಗಳೊಂದಿಗೆ ಆಟವಾಡುತ್ತಾ ಕೃಷಿ ಹೊಂಡದ ಬಳಿ ತೆರಳಿದ ವೇಳೆ ಕಾಲು ಜಾರಿ ನೀರಿಗೆ ಬಿದ್ದಿದ್ದರು. ಮೃತರು ಒಂದೇ ಕುಟುಂಬದವರಾಗಿದ್ದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ