ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕುರಿತು ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ‘ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ, ನಾವೆಲ್ಲ ಒಗ್ಗಟ್ಟಾಗಿದ್ದೇವೆ’ ಎಂದು ಸ್ಪಷ್ಟನೆ ನೀಡುತ್ತಿದ್ದರೂ, ಕಾಂಗ್ರೆಸ್‌ನ ಆಂತರಿಕ ಕದನದ ಮಾತುಗಳು ಮೇಲಿಂದ ಮೇಲೆ ಕೇಳಿಬರುತ್ತಲೇ ಇವೆ.
ಈ ಬೆಳವಣಿಗೆಗಳ ನಡುವೆಯೇ ರಾಜ್ಯ ಕಾಂಗ್ರೆಸ್‌ನ ಪ್ರಮುಖ ನಾಯಕರು ದೆಹಲಿಗೆ ತೆರಳುತ್ತಿರುವುದು ರಾಜಕೀಯ ವಲಯದಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ‘ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ’ ಎಂಬಂತೆ ಈ ದೆಹಲಿ ಯಾತ್ರೆ ಹಲವು ಉದ್ದೇಶಗಳನ್ನು ಹೊಂದಿದೆಯೇ ಎಂಬ ಪ್ರಶ್ನೆ ಮೂಡಿದೆ. ಕರ್ನಾಟಕದಿಂದಲೇ ಸಿಡಿದಿದ್ದ ‘ಮತಗಳ್ಳತನ’ ಆರೋಪ ಇದೀಗ ರಾಷ್ಟ್ರ ರಾಜಧಾನಿಯಲ್ಲಿ ಸದ್ದು ಮಾಡಲು ಸಿದ್ಧವಾಗಿದೆ. ನಾಳೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಬೃಹತ್ ಪ್ರತಿಭಟನೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರತಿಭಟನೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಲಿದ್ದಾರೆ.
ಇದಕ್ಕೆ ಮುಂಚಿತವಾಗಿಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಲು ಸಜ್ಜಾಗಿದ್ದಾರೆ. ಅವರು ಇಂದು ದೆಹಲಿಗೆ ತೆರಳಿ ಮೂರು ದಿನಗಳ ಕಾಲ ಅಲ್ಲೇ ಉಳಿಯಲಿದ್ದಾರೆ. ಈ ಅವಧಿಯಲ್ಲಿ ‘ವೋಟ್ ಚೋರಿ’ ಪ್ರತಿಭಟನೆ ಮಾತ್ರವಲ್ಲದೆ, ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ವಿಚಾರಣೆಗೆ ಡಿ.ಕೆ. ಶಿವಕುಮಾರ್ ಹಾಗೂ ಅವರ ಸಹೋದರರು ಹಾಜರಾಗಲಿದ್ದಾರೆ.
ದೆಹಲಿಯಲ್ಲಿ ಉಳಿಯುವ ಅವಧಿಯಲ್ಲಿ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಸಮಯ ಒದಗಿದರೆ, ರಾಜ್ಯ ಕಾಂಗ್ರೆಸ್‌ನ ನಾಯಕತ್ವದ ವಿಚಾರವೂ ಚರ್ಚೆಗೆ ಬರುವ ಸಾಧ್ಯತೆಯನ್ನು ನಿರಾಕರಿಸಲಾಗುವುದಿಲ್ಲ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಇತ್ತ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ನಾಯಕರು ಕೂಡ ದೆಹಲಿಗೆ ತೆರಳಿದ್ದಾರೆ. ವೋಟ್ ಚೋರಿ ವಿಚಾರದ ನೆಪದಲ್ಲಿ ದೆಹಲಿಗೆ ಹೋಗಿರುವ ಈ ನಾಯಕರು, ಹೈಕಮಾಂಡ್ ಎದುರು ಡಿ.ಕೆ. ಶಿವಕುಮಾರ್ ಪರವಾಗಿ ಬ್ಯಾಟಿಂಗ್ ಮಾಡಲಿದಾರೆಯೇ ಎಂಬ ಕುತೂಹಲವೂ ವ್ಯಕ್ತವಾಗಿದೆ. ಈ ದೆಹಲಿ ಯಾತ್ರೆ ಮುಖ್ಯಮಂತ್ರಿ ಬದಲಾವಣೆ ಕುರಿತ ಒತ್ತಡ ತಂತ್ರದ ಭಾಗವೇ ಎಂಬ ಪ್ರಶ್ನೆಗಳು ಇದೀಗ ರಾಜಕೀಯ ಪಡಸಾಲೆಯಲ್ಲಿ ಜೋರಾಗಿ ಚರ್ಚೆಯಾಗುತ್ತಿವೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




