ಬಹಳಷ್ಟು ವರ್ಷಗಳಿಂದ ಕಾಯುತ್ತಿದ್ದ ನಮ್ಮ ಮೆಟ್ರೋ ಹಳದಿ ಮಾರ್ಗ ಲೋಕಾರ್ಪಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಇದೇ ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿ ಯೆಲ್ಲೋ ಲೈನ್‌ನ ಚಾಲಕರಹಿತ ಮೆಟ್ರೋಗೆ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹಳದಿ ಲೈನ್ ಮೆಟ್ರೋಗೆ ಭೇಟಿ ನೀಡಿ ಡ್ರೈವರ್ಲೆಸ್ ಟ್ರೈನ್ನಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದರು. ಕಾಮಗಾರಿ ಮತ್ತು ಸಿದ್ಧತೆ ಬಗ್ಗೆ ಬಿಎಂಆರ್ಸಿಎಲ್ ಅಧಿಕಾರಿಗಳು ಡಿಸಿಎಂಗೆ ಮಾಹಿತಿ ನೀಡಿದರು.
R.V ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಗೆ ಸಜ್ಜಾಗಿದೆ. ಉದ್ಘಾಟನೆಯ ಸಿದ್ದತೆ ಪರಿಶೀಲನೆಗೆ ತೆರಳಿದ ಡಿಕೆ ಶಿವಕುಮಾರ್‌ಗೆ ಶಾಸಕರಾದ ಹ್ಯಾರಿಸ್, ರಾಮಮೂರ್ತಿ, ಎಂ ಕೃಷ್ಣಪ್ಪ, ಸತೀಶ್ ರೆಡ್ಡಿ ಸಾಥ್ ನೀಡಿದರು. ಈ ವೇಳೆ, ಪ್ರಧಾನಿ ಭೇಟಿ ವೇಳೆ ಬಿಜೆಪಿ ಕಾರ್ಯಕ್ರಮ ಇದೆಯೇ ಎಂಬ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಶಾಸಕ ರಾಮಮೂರ್ತಿಯಿಂದ ಮಾಹಿತಿ ಪಡೆದರು. ಪಕ್ಷದ ಕಾರ್ಯಕ್ರಮ ಸರ್ಕಲ್ ನಲ್ಲಿ ಆಯೋಜಿಸುವ ಚಿಂತನೆ ಇತ್ತು, ಈಗ ಬದಲಾಗಿದೆ. ಏನೂ ಇಲ್ಲ ಎಂದು ಮಾಹಿತಿ ನೀಡಿದರು.
ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮಿಸುವ ವಿಚಾರವಾಗಿ ಮಾತನಾಡುವ ಸಂದರ್ಭ ಕೇಳಲಾದ ಪ್ರಶ್ನೆಗೆ ಸಿಡಿಮಿಡಿಗೊಂಡ ಡಿಕೆ ಶಿವಕುಮಾರ್, ಇದು ಕೇಂದ್ರ ಸರ್ಕಾರದ ಕಾರ್ಯಕ್ರಮವಲ್ಲ ಎಂದು ಗರಂ ಆಗಿ ಪ್ರಶ್ನಿಸಿದರು. ಇದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಾರ್ಯಕ್ರಮ. ಕಾರ್ಯಕ್ರಮಕ್ಕೆ ಆಹ್ವಾನಿಸಿ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದವು. ಪ್ರಧಾನಿ ಕಚೇರಿಯಿಂದ ಆಗಸ್ಟ್ 10ಕ್ಕೆ ಸಮಯ ಕೊಟ್ಟಿದ್ದಾರೆ. ಹಾಗಾಗಿ ಆ ದಿನ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ರಾಜಕಾರಣ ಮಾಡುವಂತಹದ್ದು ಏನಿಲ್ಲ. ಅಭಿವೃದ್ಧಿ ಮುಖ್ಯ, ಈ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ ಎಂದು ಶಿವಕುಮಾರ್ ಹೇಳಿದರು.
ಮೆಟ್ರೋ ಮಾರ್ಗ ವಿಸ್ತರಣೆಯಾದರೂ ಟ್ರಾಫಿಕ್ ಕಡಿಮೆ ಆಗಿಲ್ಲವೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಏನು ಮಾಡೋಣ? ಬೆಂಗಳೂರಿಗೆ ಬಂದವರು ಇಲ್ಲೇ ಉಳಿದುಕೊಳ್ಳುತ್ತಾರೆ. ಬೆಂಗಳೂರು ಚೆನ್ನಾಗಿದೆ ಎಂದು ಇಲ್ಲೇ ಉಳಿದುಕೊಳ್ಳುತ್ತಾ ಇದ್ದಾರೆ . ಊರಿಂದ ಬಂದವರೆಲ್ಲ ಬೆಂಗಳೂರಿನಲ್ಲೇ ಉಳಿದುಕೊಳ್ಳುತ್ತಾರೆ. ಹೀಗಾಗಿ ಟ್ರಾಫಿಕ್ ಕಡಿಮೆಯಾಗುತ್ತಿಲ್ಲ ಎಂದು ಹೇಳಿದರು.
ಮುಂದಿನ ಎಲ್ಲ ನಮ್ಮ ಮೆಟ್ರೋ ಕಾಮಗಾರಿಗಳು ಡಬಲ್ ಡೆಕ್ಕರ್ ಆಗಬೇಕೆಂಬ ವಿಚಾರವಾಗಿ ಮಾತನಾಡಿ, ಈ ಬಗ್ಗೆ ನಾನೇ ಸೂಚಿಸಿದ್ದೇನೆ. ಯಾಕೆಂದರೆ, ಹಾಗೆ ಮಾಡಿದಾಗ ಮತ್ತೊಂದು ಹೊಸ ರಸ್ತೆ ನಿರ್ಮಾಣ ಆದಂತೆ ಆಗುತ್ತದೆ. ಸ್ವಲ್ಪ ದುಡ್ಡಿನ ಸಮಸ್ಯೆ ಇದೆ, ಆದರೂ ಡಬಲ್ ಡಕ್ಕರ್ ಕಾಮಗಾರಿ ಮಾಡಬೇಕು. ಈಗ ಮಾತಾಡುವ ಬಿಜೆಪಿ ಸಂಸದರೆಲ್ಲಾ ಮೋದಿ ಬಳಿ ಹಣ ಕೊಡಿಸಲಿ. ಬಿಬಿಎಂಪಿ ಮತ್ತು ಬಿಡಿಎ ಎಲ್ಲಾ ಸೇರಿ ಡಬಲ್ ಡೆಕ್ಕರ್ ಮಾಡುತ್ತೇವೆ. ಮೆಟ್ರೋ ಕಾಮಗಾರಿ ಡಬಲ್ ಡೆಕ್ಕರ್ ಬಗ್ಗೆ ಯೋಜನೆ ರೂಪಿಸುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ವರದಿ:ರೇವಣ್ಣ ನಾಟನಹಳ್ಳಿ