Monday, April 14, 2025

Latest Posts

DK Shivakumar : ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಪಬ್ಲಿಕ್ ಶಾಲೆ ಆರಂಭಕ್ಕೆ ಚಿಂತನೆ : ಡಿಕೆಶಿ

- Advertisement -

Banglore News : ಬೆಂಗಳೂರಿನ ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಜೆ ಡಬ್ಲ್ಯೂ ಮಾರಿಯೆಟ್ ಹೋಟೆಲ್ ನಲ್ಲಿ ನಡೆದ ಶಿಕ್ಷಣ ಕುರಿತ ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಫಿ ಟೇಬಲ್ ಪುಸ್ತಕ ಬಿಡುಗಡೆಗೊಳಿಸಿದರು. ಡಿಸಿಎಂ ಡಿ.ಕೆ.ಶಿವಕುಮಾರ್, ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ, ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಸಚಿವರುಗಳಾದ ಮಧು ಬಂಗಾರಪ್ಪ, ಡಾ.ಎಂ.ಸಿ.ಸುಧಾಕರ್ ಸೇರಿದಂತೆ ಇತರೆ ಸಚಿವರಾದ ಜಿ.ಪರಮೇಶ್ವರ್, ಶರಣಪ್ರಕಾಶ್ ಪಾಟೀಲ್, ಡಿ.ಸುಧಾಕರ್ ಹಾಗೂ ಮುಖ್ಯಮಂತ್ರಿಗಳ ಸಲಹೆಗಾರರಾದ ಗೋವಿಂದರಾಜ್ ಉಪಸ್ಥಿತರಿದ್ದರು.

ಈ ವೇಳೆ ಡಿಸಿಎಂ ಡಿಕೆಶಿವಕುಮಾರ್ ಶಾಲೆಗಳ ಅಭ್ಯುದಯದ ಚಿಂತನೆ ಬಗ್ಗೆ ಮಾತನಾಡಿದರು. ನಮ್ಮ ಗ್ರಾಮೀಣ ಮಕ್ಕಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವಂತೆ ಮಾಡಲು ನಾನು ಪ್ರತ್ಯೇಕ ಕಾರ್ಯಕ್ರಮವನ್ನು ಆಲೋಚಿಸಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿಗಳ ಬಗ್ಗೆ ಚರ್ಚಿಸಿದ್ದೇನೆ. ಪ್ರತಿ ಎರಡು ಪಂಚಾಯ್ತಿಗಳನ್ನು ಸೇರಿಸಿ ಪಬ್ಲಿಕ್ ಶಾಲೆ ಆರಂಭಿಸಬೇಕು. ಅದಕ್ಕೆ ಬೇಕಾಗಿರುವ ಜಾಗವನ್ನು ಸರ್ಕಾರದ ವತಿಯಿಂದ ನೀಡುತ್ತೇವೆ. ನೀವು ಅಲ್ಲಿ ಶಾಲಾ ಕಟ್ಟಡ ನಿರ್ಮಾಣ ಮಾಡಿ. ಪ್ರಮುಖ ಶಿಕ್ಷಣ ಸಂಸ್ಥೆಗಳು ಸರ್ಕಾರದ ಸಹಯೋಗದಲ್ಲಿ ಈ ಶಾಲೆಗಳ ಜವಾಬ್ದಾರಿ ವಹಿಸಿಕೊಳ್ಳುವಂತೆ ನಾವು ಮಾಡುತ್ತೇವೆ.

ನೀವು ನಮಗೆ ಹಣ ನೀಡಬೇಡಿ, ನಾವು ಕಾರ್ಯಕ್ರಮದ ರೂಪುರೇಷೆ ನೀಡುತ್ತೇವೆ. ನೀವೇ ಕಟ್ಟಡವನ್ನು ನಿರ್ಮಾಣ ಮಾಡಿ. ಈಗಾಗಲೇ ನಾನು ವಿಪ್ರೋ, ಇಫೋಸಿಸ್ ನಂತಹ ಪ್ರಮುಖ ಸಂಸ್ಥೆಗಳ ಜತೆ ಮಾತನಾಡಿದ್ದು ಅವರು ಸಾವಿರ ಕೋಟಿಗೂ ಹೆಚ್ಚು ಹಣವನ್ನು ವೆಚ್ಚ ಮಾಡಲು ಸಿದ್ಧರಿದ್ದಾರೆ.

ಮುಂದಿನ 3 ವರ್ಷಗಳಲ್ಲಿ ರಾಜ್ಯದ 2 ಸಾವಿರ ಗ್ರಾಮ ಪಂಚಾಯ್ತಿಗಳಲ್ಲಿ ಈ ಪಬ್ಲಿಕ್ ಶಾಲೆಗಳು ನಿರ್ಮಾಣವಾಗಲಿದ್ದು, ಸರ್ಕಾರದಿಂದ ಒಂದೇ ಒಂದು ರೂಪಾಯಿ ವೆಚ್ಚವಿಲ್ಲದೇ ನಿರ್ಮಾಣವಾಗಲಿದೆ ಎಂದು ನಾನು ಈ ವೇದಿಕೆ ಮೂಲಕ ನಮ್ಮ ಮುಖ್ಯಮಂತ್ರಿಗಳು ಹಾಗೂ ನಮ್ಮ ಸಹೋದ್ಯೋಗಿಗಳಿಗೆ ತಿಳಿಸಲು ಬಯಸುತ್ತೇನೆ.

ಈ ವಿಚಾರದಲ್ಲಿ ಕಾರ್ಪೋರೇಟ್ ಸಂಸ್ಥೆಗಳ ಜವಾಬ್ದಾರಿ ಮಹತ್ವದ್ದಾಗಿದ್ದು, ನಾವು ಅವರಿಗೆ ಬೇಕಾದ ಎಲ್ಲಾ ಸಹಕಾರ ನೀಡಲು ಸಿದ್ಧರಿದ್ದೇವೆ. ನಾವು ಮೊದಲು ಪ್ರಾಥಮಿಕ ಶಿಕ್ಷಣದ ಬಗ್ಗೆ ಗಮನಹರಿಸೋಣ, ನಂತರ ಹಂತಹಂತವಾಗಿ ಕೌಶಲ್ಯಭಿವೃದ್ಧಿಯತ್ತ ಗಮನಹರಿಸೋಣ. ಆಗ ಸಮಾಜ ತಾನಾಗಿಯೇ ಅಭಿವೃದ್ಧಿ ಹೊಂದುತ್ತದೆ.

ನಾನು ಹುಟ್ಟಿನಿಂದ ಕೃಷಿಕ, ವೃತ್ತಿಯಲ್ಲಿ ಉದ್ಯಮಿ, ಆಯ್ಕೆಯಲ್ಲಿ ಶಿಕ್ಷಣತಜ್ಞ, ಆಸಕ್ತಿಯಿಂದ ರಾಜಕಾರಣಿ. ಇಂದು ಶಿಕ್ಷಣತಜ್ಞನಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಈ ಸಮಾವೇಶದಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರೂ ದೇಶ ಹಾಗೂ ರಾಜ್ಯ ನಿರ್ಮಾಣದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದು, ನಿಮ್ಮೆಲ್ಲರಿಗೂ ಅಭಿನಂದನೆಗಳು.

ಬೆಂಗಳೂರಿನಲ್ಲಿ ಇಂದು ಇರುವ ಜನಸಂಖ್ಯೆ ಎಷ್ಟು? ಇದು ಏರಿಕೆಯಾಗಲು ಕಾರಣವೇನು? ನಗರ ಪ್ರದೇಶಗಳಲ್ಲಿ ಜನಸಂಖ್ಯೆ ಏರಿಕೆಯಾಗುತ್ತಿರುವುದೇಕೆ? ನನ್ನ ಕ್ಷೇತ್ರದ 70 ಸಾವಿರ ಮತದಾರರು ಬೆಂಗಳೂರಿನಲ್ಲಿದ್ದಾರೆ. ಈ ವಿಚಾರವಾಗಿ ನಾನು ಸಮೀಕ್ಷೆ ನಡೆಸಿದಾಗ ವಲಸೆ ಬಂದಿರುವವರು ಶಿಕ್ಷಣ ಹಾಗೂ ಉದ್ಯೋಗ ಕಾರಣಕ್ಕಾಗಿ ಬಂದಿದ್ದಾರೆ.

ಈ ವಲಸೆ ತಪ್ಪಿಸುವುದು ಹೇಗೆ? ಗ್ರಾಮೀಣ ಭಾಗದ ಜನರ ವಲಸೆಯನ್ನು ನಾವು ತಪ್ಪಿಸದಿದ್ದರೆ ನಗರಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ನಗರ ಪ್ರದೇಶಕ್ಕೆ ಬಂದವರೆಲ್ಲರಿಗೂ ಉತ್ತಮ ಸವಲತ್ತು ನೀಡಲು ಸಾಧ್ಯವಿಲ್ಲ. ಯುಪಿಎ ಸರ್ಕಾರದಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಂಸತ್ತಿನಲ್ಲಿ ಚರ್ಚೆ ನಡೆದು ದೇಶ ನಿರ್ಮಾಣದಲ್ಲಿ ಕಾರ್ಪೊರೇಟ್ ಸಂಸ್ಥೆಗಳು ಕೂಡ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ತೀರ್ಮಾನಿಸಲಾಯಿತು.

ನೀವೆಲ್ಲರೂ ವೈಯಕ್ತಿಕವಾಗಿ ಸಿಎಸ್ಆರ್ ಮೂಲಕ ಸೇವೆ ಸಲ್ಲಿಸುತ್ತಿದ್ದೀರಿ. ಇನ್ನುಮುಂದೆ ನೀವು ಒಟ್ಟಾಗಿ ಸೇರಿ ಯಾಕೆ ಕೆಲಸ ಮಾಡಬಾರದು. ನಾನು ಆಗಾಗ್ಗೆ ಒಂದು ಮಾತು ಹೇಳುತ್ತಿರುತ್ತೇನೆ. ಜತೆಗೂಡುವುದು ಆರಂಭ, ಜತೆಗೂಡಿ ಯೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಪ್ರಗತಿ. ಈ ಕಾರಣಕ್ಕೆ ನಾವು ಇಲ್ಲಿ ಸೇರಿದ್ದೇವೆ.

ನಾನು ರಾಮನಗರ ಜಿಲ್ಲಾಧಿಕಾರಿಗಳ ಜತೆ ಮಾತನಾಡಿ ರಾಮನಗರದಲ್ಲಿ ನಮ್ಮ ಉದ್ಯಮಿಗಳು ನಮ್ಮ ಜಿಲ್ಲೆಯಲ್ಲೇ ವೆಚ್ಚ ಮಾಡಬೇಕು. ಮೂರ್ನಾಲ್ಕು ವರ್ಷಗಳ ಹಿಂದೆ ಟೊಯೋಟಾ ಕಂಪನಿಯವರ ಜತೆ ಚರ್ಚೆ ಮಾಡಿ ನಮ್ಮ ಜಿಲ್ಲೆಯಲ್ಲಿರುವ ಸುಮಾರು 300 ಶಾಲೆಗಳ ಜವಾಬ್ದಾರಿ ನೀಡಿದೆವು. ಅವರು ಅಲ್ಲಿ ಅತ್ಯುತ್ತಮ ಶೌಚಾಲಯ ಸೌಲಭ್ಯ ಕಲ್ಪಿಸಿದ್ದಾರೆ.

ನಾವು ಈಗ ಹೊಸ ಯೋಜನೆ ರೂಪಿಸುತ್ತಿದ್ದು, ನಮ್ಮಲ್ಲಿ 6600 ಪಂಚಾಯ್ತಿಗಳಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಪ್ರಭಾವಿ ಸಂಸ್ಥೆಗಳ ಜತೆ ಮಾತನಾಡಿದ್ದು ಪಂಚಾಯ್ತಿ ಮಟ್ಟದಲ್ಲಿ ಪಬ್ಲಿಕ್ ಶಾಲೆಗಳ ಆರಂಭಿಸಲು ಚಿಂತನೆ ನಡೆಸಿದ್ದೇವೆ. ನೀವು ಬೇರೆಲ್ಲೂ ಹಣ ವೆಚ್ಚ ಮಾಡಬೇಡಿ. ಶಿಕ್ಷಣ ಕ್ಷೇತ್ರದಲ್ಲಿ ಹಣ ಹೂಡಿಕೆ ಮಾಡಿ, ಕಾರ್ಯಕ್ರಮವನ್ನು ನಾವು ನೀಡುತ್ತೇವೆ.

ನಾವು ಗ್ರಾಮೀಣ ಪ್ರದೇಶದ ಜನ ಶಿಕ್ಷಣ ಹಾಗೂ ಉದ್ಯೋಗ ಹುಡುಕಿಕೊಂಡು ನಗರ ಪ್ರದೇಶಕ್ಕೆ ಬರುವುದನ್ನು ತಪ್ಪಿಸಬೇಕು. ಇದು ಕರ್ನಾಟಕ ಸರ್ಕಾರ ಬದ್ಧತೆ. ನಮ್ಮ ಜನರಿಗೆ ತ್ತಮ ಗುಣಮಟ್ಟದ ಶಿಕ್ಷಣ ನೀಡಿದರೆ, ನಮ್ಮ ಮಕ್ಕಳು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಈಗಿನ ತಂತ್ರಜ್ಞಾನದ ಮೂಲಕ ನಮ್ಮ ಮಕ್ಕಳು ಜಾಗತಿಕ ಮಟ್ಟದಲ್ಲಿ ಆಲೋಚನೆ ಮಾಡಬಹುದು.

ಜಗತ್ತಿನ ಪ್ರಮುಖ 500 ಕಂಪನಿಗಳಲ್ಲಿ ಭಾರತೀಯ ಪಾತ್ರ ಮಹತ್ವದ್ದಾಗಿದೆ. ಇದೇ ಕಾರಣಕ್ಕೆ ಬೆಂಗಳೂರು ಐಟಿ ರಾಜಧಾನಿ, ಸಿಲಿಕಾನ್ ಸಿಟಿ ಎಂಬ ಹೆಸರು ಪಡೆದಿದೆ. ನೆದರ್ಲೆಂಡ್ ಪ್ರಧಾನಿಗಳು ಬೆಂಗಳೂರಿಗೆ ಭೇಟಿ ನೀಡಿದ್ದಾಗ ನಾನು ನೀವು ಇಲ್ಲಿಗೆ ಬರಲು ಕಾರಣವೇನು ಎಂದು ಕೇಳಿದ್ದೆ. ಅದಕ್ಕೆ ಅವರು ಉತ್ತರಿಸಿ, ನಾನು ಸಿಲಿಕಾನ್ ಸಿಟಿಗೆ ಹೋಗಿದ್ದೆ. ಅಲ್ಲಿ ಭಾರತೀಯರು ಅದರಲ್ಲೂ  ಕರ್ನಾಟಕ ರಾಜ್ಯದವರು ಹೆಚ್ಚಾಗಿದ್ದರು. ಹೀಗಾಗಿ ಇಲ್ಲಿಗೆ ಭೇಟಿ ನೀಡಲು ತೀರ್ಮಾನಿಸಿದೆ ಎಂದು ಹೇಳಿದರು.

ಇಂದಿಗೂ ದೇಶದಲ್ಲಿ ಅತಿ ಹೆಚ್ಚು ಇಂಜಿನಿಯರಿಂಗ್ ಕಾಲೇಜು ಹೊಂದಿರುವ ರಾಜ್ಯ ನಮ್ಮದು. ನಮ್ಮ ರಾಜ್ಯದಲ್ಲಿ 67 ಮೆಡಿಕಲ್ ಕಾಲೇಜುಗಳಿವೆ. ವಿಶ್ವದ ಅತ್ಯುತ್ತಮ ವೈದ್ಯರು, ಇಂಜಿನಿಯರ್ ಗಳು ಕರ್ನಾಟಕ ರಾಜ್ಯದವರು. ಇದು ನಮ್ಮ ಸಾಮರ್ಥ್ಯ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ಮಾಡುವ ಸಂದರ್ಭದಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಬಂದಾಗ, ಇಷ್ಟು ದಿನ ವಿಶ್ವದ ನಾಯಕರು ಮೊದಲು ದೆಹಲಿಗೆ ಬಂದು ನಂತರ ಭಾರತದ ಇತರೆ ನಗರಗಳಿಗೆ ಭೇಟಿ ನೀಡುತ್ತಿದ್ದರು. ಆದರೆ ಈಗ ವಿಶ್ವದ ನಾಯಕರು ಮೊದಲು ಬೆಂಗಳೂರಿಗೆ ಬಂದು ನಂತರ ದೇಶದ ಇತರೆ ನಗರಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ತಿಳಿಸಿದರು. ನಮ್ಮ ರಾಜ್ಯ ಹಾಗೂ ಬೆಂಗಳೂರು ಈ ಮಟ್ಟಕ್ಕೆ ಬೆಳೆಯಲು ಇಲ್ಲಿನ ಗುಣಮಟ್ಟದ ಶಿಕ್ಷಣ ಕಾರಣ.

ನಮ್ಮಲ್ಲಿ ಅತಿ ದೊಡ್ಡ ಮಾನವ ಸಂಪನ್ಮೂಲವನ್ನು ನಿರ್ಮಿಸಲಾಗುತ್ತಿದೆ. ನಮ್ಮಲ್ಲಿ ಅತಿ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳು ವಿದೇಶಗಳಿಗೆ ಹೋಗುತ್ತಿದ್ದು, ಸರಾಸರಿ ಯುವಕರು ಮಾತ್ರ ನಮ್ಮ ನಗರ ಪ್ರದೇಶಗಳಲ್ಲಿ ಉಳಿದುಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬ ಪೋಷಕರ ಕನಸು ತಮ್ಮ ಮಕ್ಕಳಿಗೆ ಉತ್ತಮ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸುವುದಾಗಿದೆ. ಹೀಗಾಗಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ನಗರಗಳತ್ತ ವಲಸೆ ಬರುವುದನ್ನು ತಪ್ಪಿಸಬೇಕು.

ನಿಮ್ಮ ಕೈ ಬಲಪಡಿಸಲು ಕರ್ನಾಟಕ ಸರ್ಕಾರ ಬದ್ಧವಾಗಿದೆ. ಬಲಿಷ್ಠ ಸರ್ಕಾರ ಅಧಿಕಾರದಲ್ಲಿದ್ದು, ಸಮಾಜದಲ್ಲಿ ಬದಲಾವಣೆ ತರಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ.

Media Pass: ಪತ್ರಕರ್ತರ ಪರ್ಸ್ ಮರಳಿಸಿ ಮಾನವೀಯತೆ ತೋರಿದ ವಿದ್ಯಾರ್ಥಿಗಳು

Siddaramaiah : ಉದ್ಯಮ ಜಗತ್ತಿನ ಬೇಡಿಕೆಗೆ ತಕ್ಕಂತೆ ಕೌಶಲ್ಯ ವೃದ್ಧಿಗೆ ಸರ್ಕಾರ ಬದ್ದ: ಮುಖ್ಯಮಂತ್ರಿ ಸಿದ್ದರಾಮಯ್ಯ

Poison : ಪೋಷಕರ ಮೇಲಿನ ದ್ವೇಷಕ್ಕೆ ಮಕ್ಕಳಿಗೆ ವಿಷ ಉಣಿಸಿದ ಪಾಪಿಗಳು…?!

- Advertisement -

Latest Posts

Don't Miss