ಬೆಂಗಳೂರಿಗೆ ಬಂದ ಕೆಲವು ಶಾಸಕರು ಇಲ್ಲೇ ಸೆಟಲ್ ಆಗಿ ಎರಡೆರಡು ಮದುವೆ ಮಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸದನದಲ್ಲಿ ಬಿಚ್ಚಿಟ್ಟ ಸ್ಫೋಟಕ ಮಾಹಿತಿ ಈಗ ರಾಜ್ಯ ರಾಜಕಾರಣದಲ್ಲಿ ಭಾರೀ ಬಿರುಗಾಳಿಯನ್ನೇ ಎಬ್ಬಿಸಿದೆ. ಯಾವ ಶಾಸಕರು ಈ ರೀತಿ ಎರಡು ಮದುವೆಯಾಗಿದ್ದಾರೆ ಎಂಬ ಬಗ್ಗೆ ನೇರವಾಗಿ ಹೆಸರನ್ನು ಹೇಳದಿದ್ದರೂ, ಈ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ವಿಧಾನಸಭೆಯಲ್ಲಿ ಬರಗಾಲದ ಕುರಿತು ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಾತನಾಡಿದ್ದ ಡಿ.ಕೆ. ಶಿವಕುಮಾರ್, ‘ಬೆಂಗಳೂರಿಗೆ ಬಂದವರು ಯಾರೂ ವಾಪಸ್ ಹೋಗುತ್ತಿಲ್ಲ. ಬಂದವರೆಲ್ಲರೂ ಎರಡೆರಡು ಮದುವೆ ಆಗಿದ್ದಾರೆ. ಇದರ ಇತಿಹಾಸ ನನ್ನ ಬಳಿಯಿದೆ, ಬೇಕಿದ್ದರೆ ಪಟ್ಟಿ ಬಿಡುಗಡೆ ಮಾಡುತ್ತೇನೆ’ ಎಂದಿದ್ದರು. ಇದಕ್ಕೆ ಬಿಜೆಪಿ ಶಾಸಕ ಬಿ.ಪಿ. ಹರೀಶ್ ‘ಅವರ ಎರಡು ಮೂರು ಮದುವೆ ಕಥೆ ನಿಮಗೆ ಹೇಗೆ ಗೊತ್ತು? ಅದನ್ನು ಹುಡುಕಿದ್ದೀರಲ್ವಾ?’ ಎಂದು ಕಿಚಾಯಿಸಿದ್ದರು. ಇದಕ್ಕೆ ಉತ್ತರಿಸಿದ್ದ ಡಿ.ಕೆ. ಶಿವಕುಮಾರ್, ‘ಅದೆಲ್ಲಾ ಅವರ ವೈಯಕ್ತಿಕ, ಪರ್ಸನಲ್ ಆಗಿ ಮಾತನಾಡೋಣ’ ಎಂದು ನಗುತ್ತಲೇ ಜಾರಿಕೊಂಡಿದ್ದರು.
ಡಿಕೆಶಿ ಅವರ ಈ ಹೇಳಿಕೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರವಾಗಿ ತಿರುಗೇಟು ನೀಡಿದ್ದಾರೆ. ‘ಕಾಂಗ್ರೆಸ್ ಪಕ್ಷವನ್ನು ದೇವರೇ ಕಾಪಾಡಬೇಕು, ಎಂತಹ ಮುಖ್ಯಮಂತ್ರಿಗಳನ್ನು ಇಟ್ಟುಕೊಂಡಿದ್ದಾರೆ ಎಂದು ಕಾಂಗ್ರೆಸ್ ಶಾಸಕರಿಗೇ ಅನ್ನಿಸಬೇಕು’ ಎಂದು ವಾಗ್ದಾಳಿ ನಡೆಸಿದರು. ಸದನದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಇಂತಹ ಹೇಳಿಕೆ ನೀಡಿದಾಗ ಕಾಂಗ್ರೆಸ್‌ನವರು ಪ್ರತಿಭಟನೆ ಮಾಡಬೇಕಿತ್ತು ಎಂದು ಕಿಡಿಕಾರಿದರು.
ಒಟ್ಟಿನಲ್ಲಿ, ವಿಪಕ್ಷಗಳ ನಗುವಿಗೆ ಹಾಗೂ ಆಕ್ರೋಶಕ್ಕೆ ಕಾರಣವಾಗಿರುವ ಡಿ.ಕೆ. ಶಿವಕುಮಾರ್ ಅವರ ಈ ‘ಎರಡನೇ ಮದುವೆ’ ಪಾಲಿಟಿಕ್ಸ್ ಮುಂಬರುವ ದಿನಗಳಲ್ಲಿ ಮತ್ತಷ್ಟು ರಾಜಕೀಯ ತಿರುವು ಪಡೆದುಕೊಳ್ಳುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.




