ಬೆಂಗಳೂರು ಗುಂಡಿ ಸಮಸ್ಯೆ ಡಿಕೆ ಶಿವಕುಮಾರ್‌ಗೆ ಟೆನ್ಷನ್!

ಲಾಜಿಸ್ಟಿಕ್ಸ್ ಟೆಕ್ ಪ್ಲಾಟ್‌ಫಾರ್ಮ್ ‘ಬ್ಲಾಕ್‌ ಬಕ್’ ಕಂಪನಿ, ಬೆಂಗಳೂರಿನ ರಸ್ತೆ ಗುಂಡಿ ಮತ್ತು ಧೂಳಿನ ಸಮಸ್ಯೆಯಿಂದ ಸಿಬ್ಬಂದಿಯ ಪ್ರಯಾಣ ಅವಧಿ ಹೆಚ್ಚುತ್ತಿರುವುದನ್ನು ಉಲ್ಲೇಖಿಸಿ, ನಗರ ಬಿಟ್ಟು ಹೊರ ಹೋಗಲು ನಿರ್ಧರಿಸಿರುವುದಾಗಿ ಹೇಳಿಕೆ ನೀಡಿದೆ. ಇದಕ್ಕೆ ಪ್ರತಿಯಾಗಿ ಆಂಧ್ರಪ್ರದೇಶ ಸರ್ಕಾರ ಕಂಪನಿಯನ್ನು ತಮ್ಮ ರಾಜ್ಯಕ್ಕೆ ಆಹ್ವಾನಿಸಿದ್ದು, ವಿಷಯ ತೀವ್ರ ಚರ್ಚೆಗೆ ಕಾರಣವಾಯಿತು. ಬ್ಲಾಕ್‌ ಬಕ್ ಕಂಪನಿಯ ಸಹ ಸಂಸ್ಥಾಪಕ ರಾಜೇಶ್ ಯಬಾಜಿ, ಕಳೆದ 9 ವರ್ಷಗಳಿಂದ ಬೆಂಗಳೂರಿನ ಹೊರ ವರ್ತುಲ ರಸ್ತೆಯ ಬಳಿ ಕಚೇರಿ ಮತ್ತು ಮನೆ ಹೊಂದಿದ್ದರೂ, 1.5 ಗಂಟೆಗಳ ಹೆಚ್ಚುವರಿ ಪ್ರಯಾಣದ ಕಷ್ಟದಿಂದ ಮುಂದುವರಿಯುವುದು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಈ ಹೇಳಿಕೆಯ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಗರದ ರಸ್ತೆ ಗುಂಡಿ ಮುಚ್ಚುವ ಕಾರ್ಯ ಆರಂಭಗೊಂಡಿದ್ದು, ನವೆಂಬರ್ ವೇಳೆಗೆ ಗುಂಡಿ ಮುಕ್ತಗೊಳಿಸುವುದಾಗಿ ಭರವಸೆ ನೀಡಿದರು. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಮೆಟ್ರೋ ಕಾಮಗಾರಿ ಮುಗಿದ ತಕ್ಷಣ ರಸ್ತೆ ಸಮಸ್ಯೆ ಪರಿಹಾರವಾಗಲಿದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಂಧ್ರಪ್ರದೇಶದ ಸಚಿವ ಲೋಕೇಶ್ ನಾರಾ, ಬ್ಲಾಕ್‌ ಬಕ್‌ ಸಂಸ್ಥಾಪಕರ ಟ್ವೀಟ್‌ಗೆ ಪ್ರತಿಕ್ರಿಯಿಸಿ, ಕಂಪನಿಯನ್ನು ವೈಜಾಗ್‌ಗೆ ಆಹ್ವಾನಿಸಿದರು. ವೈಜಾಗ್ ದೇಶದ ಟಾಪ್ ಸ್ವಚ್ಛ ನಗರಗಳಲ್ಲಿ ಒಂದಾಗಿ, ಉತ್ತಮ ಮೂಲಸೌಕರ್ಯ ಮತ್ತು ಮಹಿಳೆಯರಿಗೆ ಸುರಕ್ಷಿತ ನಗರವೆಂಬ ಖ್ಯಾತಿ ಹೊಂದಿದೆ ಎಂದು ತಿಳಿಸಿದರು.

ನಗರದ ರಸ್ತೆ ಗುಂಡಿ ಸಮಸ್ಯೆಗೆ ಸಂಬಂಧಿಸಿದಂತೆ ಕಾನೂನು ಸಚಿವ ಎಚ್‌.ಕೆ. ಪಾಟೀಲ್, ಮಳೆಯಿಂದಾಗಿ ಗುಂಡಿಗಳು ಹೆಚ್ಚಾಗಿದ್ದು, ಪರಿಹಾರಕ್ಕಾಗಿ ಕ್ರಮ ಜರುಗುತ್ತಿದೆ ಎಂದು ಹೇಳಿದರು. ಸಮಾಜ ಕಲ್ಯಾಣ ಸಚಿವ ಡಾ. ಎಚ್‌.ಸಿ. ಮಹದೇವಪ್ಪ, ಬಿಜೆಪಿ ಸರ್ಕಾರದಲ್ಲಿ ರಸ್ತೆ ಸುಧಾರಣೆ ಆಗದ ಕಾರಣ ಈಗ ಸಮಸ್ಯೆ ಎದುರಾಗುತ್ತಿದೆ ಎಂದು ಹೇಳಿ, ಪ್ರಸ್ತುತ ಸರ್ಕಾರ ರಸ್ತೆಗಳನ್ನು ದುರಸ್ತಿ ಮಾಡಲು ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

About The Author