ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣದ ಸಾಧ್ಯತೆ ಮತ್ತಷ್ಟು ಬಲಗೊಂಡಿದೆ. ಇದರ ಕುರಿತು ಶೀಘ್ರದಲ್ಲೇ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ಹೆಚ್ಚುವರಿ ಜಾಗ ಮತ್ತು ಉತ್ತಮ ಸೇವೆಗಳ ಅಗತ್ಯ ಹಿನ್ನೆಲೆಯಲ್ಲಿ ದಕ್ಷಿಣ ಬೆಂಗಳೂರಿನ ಸ್ಥಳವನ್ನು ಪರಿಗಣಿಸಲಾಗುತ್ತಿದೆ. ಎರಡನೇ ಏರ್‌ಪೋರ್ಟ್ ಕುರಿತು ಕೇಂದ್ರಕ್ಕೆ ವರದಿ ಸಲ್ಲಿಸಿದ್ದೇವೆ. ಈಗ ಕೇಂದ್ರದ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿ ಮೇಕೆದಾಟು ಯೋಜನೆ ಅನುಷ್ಠಾನ ಹಾಗೂ ಕಾವೇರಿ ನೀರಾವರಿ ನಿಗಮ ಮಂಡಳಿ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ಪರಿಸ್ಕೃತ ಡಿಪಿಆರ್ ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದರು. ಮೇಕೆದಾಟು ಯೋಜನೆ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಯೋಜನೆಯ ಮುಂದಿನ ಹಂತಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಡಿಪಿಆರ್‌ನಲ್ಲಿ ಸಂಪೂರ್ಣ ವಿವರ, ಮುಳುಗಡೆಯಾಗುವ ಅರಣ್ಯ ಪ್ರದೇಶ ಸೇರಿದಂತೆ ಎಲ್ಲಾ ಮಾಹಿತಿ ನೀಡಬೇಕು. ಮೇಕೆದಾಟು ಯೋಜನೆ ಕಚೇರಿಯನ್ನು ಹಾರೋಬೆಲೆಯಲ್ಲಿ ತೆರೆಯಲಾಗಿದೆ. ಜೊತೆಗೆ, ಯೋಜನೆಗೆ ವೇಗ ನೀಡಲು ರಾಮನಗರದಲ್ಲಿ ಸಿಇ ಮತ್ತು ಸಿಸಿಎಫ್ ಅಧಿಕಾರಿಗಳಿಂದ ಕೂಡಿದ ಪ್ರತ್ಯೇಕ ಕಚೇರಿ ಆರಂಭಿಸಲು ನಿರ್ಧರಿಸಿದ್ದೇವೆ ಎಂದು ಉಪಮುಖ್ಯಮಂತ್ರಿ ತಿಳಿಸಿದ್ದಾರೆ.
ಹೊಸ ಡಿಪಿಆರ್ ಸಿದ್ಧಪಡಿಸುವ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಈ ಹಿಂದೆ ಸಲ್ಲಿಸಿದ್ದ ಡಿಪಿಆರ್ ಅನ್ನು ಚಾಲ್ತಿದರಗಳಿಗೆ ಪರಿಸ್ಕರಿಸಿ ಪುನಃ ಸಲ್ಲಿಸುತ್ತೇವೆ. ಕಾನೂನು ಪ್ರಕಾರ ಯಾವ ಸಂಸ್ಥೆಯ ಮುಂದೆ ಮಂಡಿಸಬೇಕೋ ಅವರ ಮುಂದೆ ಮಂಡಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ತುಮಕೂರು ಮೆಟ್ರೋ ಮಾರ್ಗದ ಬಗ್ಗೆ ಉದ್ಭವಿಸಿರುವ ವಿರೋಧದ ಕುರಿತು ಅವರು ಸ್ಪಷ್ಟಪಡಿಸುತ್ತಾ, ಅಲ್ಲಿನ ಜನಪ್ರತಿನಿಧಿಗಳು ನನ್ನ ಬಳಿ ಮನವಿ ಮಾಡಿದ್ದಾರೆ. ಅದರ ಸಾಧ್ಯತೆಗಳ ಕುರಿತು ಅಧ್ಯಯನ ಮಾಡುತ್ತಿದ್ದೇವೆ. ಇದರಲ್ಲಿ ಟೀಕೆಗೆ ಅವಕಾಶವೇ ಇಲ್ಲ. ಖಾಸಗಿ–ಸಾರ್ವಜನಿಕ ಸಹಭಾಗಿತ್ವದಲ್ಲಿ ಯೋಜನೆ ನಡೆಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಹೂಡಿಕೆ ಮಾಡಲು ಮುಂದಾಗುವವರು ಇದ್ದರೆ ಯಾವ ಮಾರ್ಗದಲ್ಲಿ ಮುಂದುವರಿಯಬಹುದು ಎನ್ನುವುದನ್ನೂ ಪರಿಶೀಲಿಸಬೇಕು. ಯಾರಾದರೂ ಚಂದ್ರನಿಗೆ ಹೋಗಬೇಕು ಎಂದರೆ ಅದು ಸಾಧ್ಯವೇ ಅಲ್ಲವೇ ಎಂದು ನೋಡಲೇಬೇಕು ಅಲ್ಲವೆ? ಎಂದು ಪ್ರತಿಕ್ರಿಯಿಸಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




