ಹೇಮಾವತಿ ಕೆನಾಲ್ ಕಾಮಗಾರಿ ನೋಡಿ ಡಿಕೆಶಿ ಏನಂದ್ರು?

ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ ಯೋಜನೆ. ಹೆಸರು ಕೇಳಿರ್ದೇನೆ ತುಮಕೂರು ಜನರ ರಕ್ತ ಕೊತ ಕೊತ ಕುದಿಯೋಕೆ ಶುರುವಾಗುತ್ತೆ. ತುಮಕೂರು ಜಿಲ್ಲೆಯ ನೀರನ್ನು, ಮಾಗಡಿಗೆ ಹರಿಸೋಕೆ ಕುತಂತ್ರ ಹೆಣೆಯಲಾಗಿದೆ ಅನ್ನೋ ಜನರ ಆಕ್ರೋಶ, ಇನ್ನೂ ಆರಿಲ್ಲ. ಮೇ 31, ಸಂಕಾಪುರದ ಬಳಿ ರೈತ ಪರ ಸಂಘಟನೆಗಳು, ಬಿಜೆಪಿ ನಾಯಕರು, ಕೆನಾಲ್‌ ಕಾಮಗಾರಿಗೆ ಮುತ್ತಿಗೆ ಹಾಕಿದ್ರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು, ಹೆದ್ದಾರಿ ತಡೆದು, ಟೈಯರ್‌ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ರು. ಜನರ ನಿಯಂತ್ರಣಕ್ಕೆ ಲಾಠಿಚಾರ್ಜ್‌ ಮಾಡಿ, ನೂರಾರು ಜನರನ್ನು ವಶಕ್ಕೆ ಪಡೆಯಲಾಗಿತ್ತು. ಹಲವರು ಮೇಲೆ ಎಫ್‌ಐಆರ್‌ ದಾಖಲಿಸಲಾಗಿತ್ತು.

ಇದೀಗ, ಭಾರೀ ವಿರೋಧದ ನಡುವೆ ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದೆ. ಹೇಮಾವತಿ ಕೆನಾಲ್‌ನ ಸುಮಾರು 70 ಕಿಲೋ ಮೀಟರ್‌ ಭಾಗ, ಸುಂಕಾಪುರ ಬಳಿ ಬಂದಿದೆ. ಕೆನಾಲ್‌ ಮೂಲಕ ನೀರು ಹರಿದರೆ, ತುಮಕೂರು ಜಿಲ್ಲೆಗೆ ನೀರಿನ ಕೊರತೆ ಉಂಟಾಗಲಿದೆ ಅನ್ನೋದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇದ್ಯಾವುದಕ್ಕೂ ಕೇರ್‌ ಮಾಡದ ಡಿಸಿಎಂ ಡಿ.ಕೆ. ಶಿವಕುಮಾರ್‌, ಕನಸಿನ ಯೋಜನೆಯ ಸಾಕಾರಕ್ಕೆ ಪಣತೊಟ್ಟಿದ್ದಾರೆ. ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ ಯೋಜನೆ ಡಿಕೆಶಿ ಕನಸು. ಕುಣಿಗಲ್‌ ಮೂಲಕ ಮಾಗಡಿಯ ಶ್ರೀರಂಗ ಏತ ನೀರಾವರಿಗೆ, ಹೇಮಾವತಿ ನೀರನ್ನು ತೆಗೆದುಕೊಂಡು ಹೋಗುವುದೇ, ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಸೆಪ್ಟೆಂಬರ್‌ 12ರಂದು ತುಮಕೂರು ಜಿಲ್ಲೆಗೆ ಡಿ.ಕೆ. ಶಿವಕುಮಾರ್ ಭೇಟಿ ಕೊಟ್ಟಿದ್ದಾರೆ. ಸುಂಕಾಪುರ ಬಳಿ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯನ್ನು, ಪರಿಶೀಲಿಸಿದ್ರು. ಈ ವೇಳೆ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ, ಮಾಜಿ ಸಚಿವ ಟಿ.ಬಿ. ಜಯಚಂದ್ರ, ಶಾಸಕರಾದ ಗುಬ್ಬಿ ಶ್ರೀನಿವಾಸ್, ಡಾ. ರಂಗನಾಥ್ ಹಾಗೂ ಜಿಲ್ಲೆಯ ಅಧಿಕಾರಿ ವರ್ಗವೇ ಜೊತೆಯಾಗಿತ್ತು. ಕೆನಾಲ್‌ ಕಾಮಗಾರಿ ವೀಕ್ಷಿಸಿದ ಡಿಕೆಶಿಗೆ, ನಕ್ಷೆ ಮೂಲಕ ಅಧಿಕಾರಿಗಳು ಸಂಪೂರ್ಣ ವಿವರ ನೀಡಿದ್ರು.

ಇದಕ್ಕೂ ಮುನ್ನ, ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ಘಟಕಕ್ಕೆ ಭೇಟಿ ನೀಡಿದ್ರು. ವಿಮಾನ, ಹೆಲಿಕಾಪ್ಟರ್‌, ಇಂಜಿನ್‌, ಏವಿಯಾನಿಕ್ಸ್, ಎಲೆಕ್ಟ್ರಾನಿಕ್ಸ್, ಹಾಗೂ ಬಿಡಿಭಾಗಗಳ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ, ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.

2019ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ, ಹೆಚ್‌.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ, ಕೆನಾಲ್‌ ಯೋಜನೆಗೆ ಆದೇಶ ಹೊರಡಿಸಲಾಗಿತ್ತು. ಈ ಸಂಬಂಧ 600 ಕೋಟಿ ಅನುದಾನವನ್ನೂ ಬಿಡುಗಡೆ ಮಾಡಲಾಗಿತ್ತು. ಈಗ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಕೆ ಶಿವಕುಮಾರ್, ನೆನೆಗುದಿಗೆ ಬಿದ್ದಿದ್ದ ಎಕ್ಸ್​ ಪ್ರೆಸ್​ ಲಿಂಕ್​ ಕೆನಾಲ್ ಕಾಮಗಾರಿಗೆ ಮರು ಜೀವ ಕೊಟ್ಟಿದ್ದಾರೆ. ಒಟ್ನಲ್ಲಿ ಡಿ.ಕೆ. ಶಿವಕುಮಾರ್‌ ಛಲದಂಕಮಲ್ಲನಂತೆ, ಭಾರೀ ವಿರೋಧದ ನಡುವೆಯೇ, ತವರಿನ ಋಣ ತೀರಿಸಲು ಪಣ ತೊಟ್ಟಿದ್ದಾರೆ.

About The Author