ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ, ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗಿಯಾಗಿದ್ರು. ಈ ವೇಳೆ ಮಾತನಾಡಿದ ಡಿಕೆಶಿ, ಅರಸೀಕೆರೆ ತಾಲ್ಲೂಕಿನ ಜನರು ಶಾಸಕರು ಮತ್ತು ಸಂಸದರನ್ನು ಆಯ್ಕೆ ಮಾಡುವ ಮೂಲಕ ಎರಡು ಕಣ್ಣುಗಳನ್ನು ಕೊಟ್ಟಿದ್ದೀರಿ. ಕನಕಪುರ ಹಾಗೂ ವರುಣ ಕ್ಷೇತ್ರಕ್ಕಿಂತ ಹೆಚ್ಚು ಕೆಲಸಗಳನ್ನು, ಅರಸೀಕೆರೆ ಕ್ಷೇತ್ರಕ್ಕೆ ಶಿವಲಿಂಗೇಗೌಡರು ಮಾಡಿಸಿದ್ದಾರೆ. ಎತ್ತಿನಹೊಳೆ, ಹೇಮಾವತಿ ನೀರು ಕೊಡಲೇಬೇಕೆಂದು ಸಚಿವ ಸಂಪುಟದಲ್ಲಿ ಅನುಮೋದನೆ ಕೊಡಿಸಿದ್ದಾರೆ.
ಧರ್ಮರಾಯನಿಗೆ ಭೀಷ್ಮ ಒಂದು ಮಾತು ಹೇಳುತ್ತಾರೆ. ತಂದೆ-ತಾಯಿ, ಗುರು-ದೇವರು, ಪ್ರಜೆಗಳ ಋಣ ತೀರಿಸಬೇಕು. ಮಲ್ಲಿಕಾರ್ಜುನ ಖರ್ಗೆ ಅವರು 371ಜೆ ಕಲಂ ಮೂಲಕ ಋಣ ತೀರಿಸಿದಂತೆ, ಶಾಸಕ ಶಿವಲಿಂಗೇಗೌಡರು ಮತದಾರ ಋಣ ತೀರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ.
ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಕೂಡ ಮುಖ್ಯ. ಶಿವಲಿಂಗೇಗೌಡರ ಬಗ್ಗೆ ನಂಬಿಕೆ ವ್ಯಕ್ತಪಡಿಸಿದ್ದೀರಿ. ಇಡೀ ರಾಜ್ಯಕ್ಕೆ ದೊಡ್ಡ ಸಂದೇಶ ಕೊಟ್ಟಿದ್ದೀರಿ. ಜಿಲ್ಲೆಯಲ್ಲಿ ಒಬ್ಬರೇ ಗೆದ್ದಿರಬಹುದು. ಆದರೆ, ಶಿವಲಿಂಗೇಗೌಡ, ಶ್ರೇಯಸ್ ಪಟೇಲ್ ಹಾಗೂ ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ಮುಂದಿನ ಚುನಾವಣೆಯಲ್ಲಿ ಏಳೂ ಕ್ಷೇತ್ರಗಳನ್ನು ಗೆಲ್ಲುವ ಆತ್ಮವಿಶ್ವಾಸವಿದೆ ಎಂದು ಹೇಳಿದರು.
ಇನ್ನು ಬಿಜೆಪಿಯವರು ಭಾವನೆ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ನಮಗೆ ದೇವರು ಇಲ್ಲವೇ? ನಮಗೆ ದೇವರ ಮೇಲೆ ನಂಬಿಕೆ ಇಲ್ಲವೇ? ದೇವರು, ಧರ್ಮ ಕೇವಲ ಬಿಜೆಪಿಯವರ ಆಸ್ತಿಯಲ್ಲ. ಎಲ್ಲ ಧರ್ಮವನ್ನು ಕಾಪಾಡಬೇಕು ಎಂಬ ಉದ್ದೇಶದಿಂದ ಐದು ಗ್ಯಾರಂಟಿ ಕೊಟ್ಟಿದ್ದೇವೆ. ಆರ್. ಅಶೋಕ್, ಬಿ.ಎಸ್. ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಅವರು ಈ ರೀತಿ ಯಾವುದೇ ಕಾರ್ಯಕ್ರಮ ನೀಡಿದ್ದಾರೆಯೇ? ಕೊಟ್ಟ ಕುದುರೆ ಏರದವನು ವೀರನೂ ಅಲ್ಲ, ಶೂರನು ಅಲ್ಲ. ಈಗ ಅವರ ಜೊತೆಗೆ ಜೆಡಿಎಸ್‌ನವರು ಸೇರಿದ್ದಾರೆ. ಇಬ್ಬರಲ್ಲ, ಎಷ್ಟು ಜನರು ಸೇರಿದರೂ, 2028ರಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ