ರಾಜ್ಯ ರಾಜಕೀಯ ವಲಯದಲ್ಲಿ ಮುಖ್ಯಮಂತ್ರಿ ಸ್ಥಾನ ಹಂಚಿಕೆ ಕುರಿತ ಚರ್ಚೆಗಳು ಮರುಬಲ ಪಡೆದುಕೊಂಡಿರುವ ಸಂದರ್ಭದಲ್ಲಿ, ಗದುಗಿನಲ್ಲಿ ನಡೆದ ಭವಿಷ್ಯವಾಣಿಯೊಂದು ಈಗ ರಾಜಕೀಯ ವಲಯದಲ್ಲಿ ಹೊಸ ಕುತೂಹಲಕ್ಕೆ ಕಾರಣವಾಗಿದೆ. ಗದುಗಿನ ದೇವಿ ಆರಾಧಕಿ ಭೈಲಮ್ಮ ಬಾಳಮಣ್ಣವರ ಅವರು, ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿ ಆಗುವರು ಎಂದು ನುಡಿದ ಭವಿಷ್ಯವಾಣಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಚೋಟೇಶ್ವರ ನಗರದಲ್ಲಿ ವಾಸಿಸುತ್ತಿರುವ ಭೈಲಮ್ಮ, ಹುಲಿಗೆಮ್ಮದೇವಿಯ ಆರಾಧಕಿಯಾಗಿದ್ದು, ದೇವರ ಗದ್ದುಗೆ ಹಾಕಿ, ಕೊಡ ಎತ್ತುವ ಮೂಲಕ ಬಂದ ನುಡಿಯನ್ನು ಭವಿಷ್ಯವಾಣಿಯಾಗಿ ತಿಳಿಸಿದ್ದಾರೆ. ಡಿ.ಕೆ. ಶಿವಕುಮಾರ್ ಚಿಂತಿಸಬೇಕಾಗಿಲ್ಲ, ಅವರು ಮುಖ್ಯಮಂತ್ರಿ ಆಗುವರು. ಎರಡು ತಿಂಗಳೊಳಗೆ ಅವರು ಅಧಿಕಾರ ಸ್ವೀಕರಿಸುವರು ಮತ್ತು ಮುಂದಿನ ಎರಡೂವರೆ ವರ್ಷ ರಾಜ್ಯವನ್ನು ನಡೆಸುವರು ಎಂದು ಭೈಲಮ್ಮ ಹೇಳಿದ್ದಾರೆ.
ತಮ್ಮ ಭವಿಷ್ಯವಾಣಿಯಲ್ಲಿ ಅವರು ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವಿನ ಸಂಬಂಧದ ಕುರಿತು ಕೂಡ ಮಾತನಾಡಿದ್ದು, ಸಿದ್ದರಾಮಯ್ಯ ಅವರು ಶಿವಕುಮಾರ್ ಅವರನ್ನು ತಮ್ಮನಂತೆ ನೋಡಿಕೊಳ್ಳುತ್ತಾರೆ, ಅವರ ಬಳಿ ಕಪಟ ಬುದ್ಧಿ ಇಲ್ಲ. ಆದ್ದರಿಂದ ಅವರು ಸ್ವಯಂಪ್ರೇರಿತವಾಗಿ ಸ್ಥಾನ ಬಿಟ್ಟುಕೊಡುತ್ತಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಇಬ್ಬರ ಪೈಪೋಟಿಯಲ್ಲಿ ಮೂರನೇ ವ್ಯಕ್ತಿಗೆ ಲಾಭವಾಗಬಹುದು ಎಂದು ನಿರೀಕ್ಷಿಸುವವರಿಗೂ ಭೈಲಮ್ಮ ಪ್ರತಿಕ್ರಿಯಿಸಿದ್ದು, ಯಾರೂ ಸಿಎಂ ಆಗುವುದಿಲ್ಲ, ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗುವುದು ಖಚಿತ ಎಂದು ಹೇಳಿದ್ದಾರೆ.
ಭವಿಷ್ಯವಾಣಿಯು ಸುಳ್ಳಾಗುವುದಿಲ್ಲ ಎಂಬ ದೃಢ ನಿಲುವು ವ್ಯಕ್ತಪಡಿಸಿದ ಭೈಲಮ್ಮ, ಮುಖ್ಯಮಂತ್ರಿ ಆದ ನಂತರ ಶಿವಕುಮಾರ್ ಅವರು ದೇವಿಯನ್ನು ನೆನೆದು ಆಡಳಿತ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ. ಈ ಹೇಳಿಕೆಗಳು ಹೊರಬಿದ್ದ ನಂತರ, ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗಳು ಜೋರಾಗಿದ್ದು, ರಾಜಕೀಯ ವಲಯ, ಪಕ್ಷದ ಕಾರ್ಯಕರ್ತರು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರ ನಡುವೆ ಕುತೂಹಲ ಹೆಚ್ಚಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

