Tuesday, October 28, 2025

Latest Posts

ಡಿಕೆಶಿ​ – ತೇಜಸ್ವಿ ಸೂರ್ಯ ಭೇಟಿ, ಇಬ್ಬರ ನಡುವೆ ಚರ್ಚೆ ಆಗಿದ್ದೇನು?

- Advertisement -

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಚರ್ಚೆ ನಡೆಸಿದ್ದಾರೆ. ಈ ಭೇಟಿಯಲ್ಲಿ ನಗರದ ಮೂಲಸೌಕರ್ಯ, ಟ್ರಾಫಿಕ್ ಸಮಸ್ಯೆ ಹಾಗೂ ರಸ್ತೆ ಗುಂಡಿಗಳ ಕುರಿತಂತೆ ವಿಸ್ತೃತ ಚರ್ಚೆ ನಡೆದಿದೆ.

ಭೇಟಿ ಬಳಿಕ ಮಾಧ್ಯಮಗಳೊಂದಿಗೆ ತೇಜಸ್ವಿ ಸೂರ್ಯ ಮಾತನಾಡಿದ್ದಾರೆ. ನಾವು ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಪರಿಹಾರ ಕುರಿತು ಉಪಮುಖ್ಯಮಂತ್ರಿಗಳೊಂದಿಗೆ ಸವಿಸ್ತಾರವಾಗಿ ಚರ್ಚೆ ಮಾಡಿದ್ದೇವೆ. ವಿಶೇಷವಾಗಿ ಟನಲ್ ರೋಡ್ ಯೋಜನೆ ಕುರಿತು ಅಭಿಪ್ರಾಯ ವಿನಿಮಯ ನಡೆದಿದೆ ಎಂದು ಹೇಳಿದರು.

ಟ್ರಾಫಿಕ್ ಕಡಿಮೆ ಮಾಡಲು ನಮ್ಮ ರಸ್ತೆಗಳ ಮೇಲೆ ಓಡಾಡುವ ವಾಹನಗಳ ಸಂಖ್ಯೆಯನ್ನು ತಗ್ಗಿಸುವ ಅಗತ್ಯವಿದೆ. ಇದಕ್ಕಾಗಿ ಕನಿಷ್ಠ 70% ಜನರು ಸಾರ್ವಜನಿಕ ಸಾರಿಗೆ ಉಪಯೋಗಿಸುವಂತೆ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.

ಮೆಟ್ರೋ ಸಂಪರ್ಕವನ್ನು 300 ಕಿಲೋಮೀಟರ್‌ಗಳವರೆಗೆ ವಿಸ್ತರಿಸಿ, ಪ್ರತೀ 3 ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಲಭ್ಯವಾಗುವ ವ್ಯವಸ್ಥೆ ಮಾಡಿದರೆ ಜನರು ಸಾರ್ವಜನಿಕ ಸಾರಿಗೆಯತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಜನರ ವಾಸಸ್ಥಳದಿಂದ 5 ನಿಮಿಷ ನಡೆದುಕೊಂಡು ಹೋದರೆ ಮೆಟ್ರೋ ಸ್ಟೇಷನ್ ಸಿಗುವಂತಾಗಬೇಕು ಎಂದು ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟರು.

ಇದಲ್ಲದೆ, ಮಾಸ್ಟರ್ ಪ್ಲ್ಯಾನ್ ಪ್ರಕಾರ 300 ಕಿಲೋಮೀಟರ್ ಸಬ್ ಅರ್ಬನ್ ರೈಲು ಯೋಜನೆ ಕೂಡ ಬೆಂಗಳೂರಿಗೆ ಅಗತ್ಯವಾಗಿದೆ. ಇದರಿಂದ ನಗರ ಟ್ರಾಫಿಕ್ ಒತ್ತಡ ಬಹಳಷ್ಟು ಕಡಿಮೆಯಾಗಬಹುದು ಎಂದು ಸಂಸದರು ತಿಳಿಸಿದ್ದಾರೆ. ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಈ ಸಲಹೆಗಳನ್ನು ಗಮನಿಸಿ, ನಗರ ಮೂಲಸೌಕರ್ಯ ಸುಧಾರಣೆಗಾಗಿ ಬೃಹತ್ ಯೋಜನೆಗಳ ಬಗ್ಗೆ ಚರ್ಚೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss