ಬೆಂಗಳೂರು: “ಹೆಚ್ಚುವರಿ ಡಿಸಿಎಂ ವಿಚಾರವಾಗಿ ಮಾಧ್ಯಮಗಳ ಮುಂದೆ ಮಾತನಾಡುತ್ತಿರುವವರು, ಹೈಕಮಾಂಡ್ ನಾಯಕರ ಬಳಿ ಹೋಗಿ ಮಾತನಾಡಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.
ಹೆಚ್ಚುವರಿ ಡಿಸಿಎಂ ಚರ್ಚೆ ಕುರಿತಾಗಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮಾತನಾಡುತ್ತೀರಾ ಎಂದು ಮಾಧ್ಯಮಗಳು ಕೇಳಿದಾಗ, “ಮಾಧ್ಯಮಗಳು ಪ್ರಚಾರ ಮಾಡುತ್ತವೇ ಹೊರತು, ಪರಿಹಾರ ನೀಡುವುದಿಲ್ಲ. ಈ ವಿಚಾರವಾಗಿ ಮಾಧ್ಯಮಗಳ ಮುಂದೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ನಾನು ಕೂಡ ಮಾಧ್ಯಮಗಳ ಮುಂದೆ ಚರ್ಚೆ ಮಾಡುವುದಿಲ್ಲ. ಯಾರು ಬೇಕಾದರೂ ಹೈಕಮಾಂಡ್ ನಾಯಕರ ಬಳಿ ಹೋಗಿ ಪರಿಹಾರ ಹುಡುಕಿಕೊಂಡು ಬರಲಿ” ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರವಾಗಿ ರಾಜಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಬಹಳ ಸಂತೋಷ. ಸಮಯ ವ್ಯರ್ಥ ಮಾಡಬಾರದು. ಅವರಿಗೆ ಪರಿಹಾರ ಕಂಡುಕೊಳ್ಳಲು ಎಲ್ಲಿ ಹೋಗಬೇಕೋ ಅಲ್ಲಿ ಹೋಗಲಿ. ಆರೋಗ್ಯ ಸರಿಯಿಲ್ಲ ಎಂದು ವೈದ್ಯರ ಬಳಿ ಹೋದರೆ ಔಷಧಿ ನೀಡುತ್ತಾರೆ. ಅದೇ ರೀತಿ ಅವರು ಎಲ್ಲಾದರೂ ಪರಿಹಾರವನ್ನು ಹುಡುಕಿಕೊಂಡು ಹೋಗಲಿ” ಎಂದು ತಿಳಿಸಿದರು.