ತಮಿಳುನಾಡಿನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆ ರಾಜಕೀಯ ಚಟುವಟಿಕೆಗಳು ಈಗಾಗಲೇ ತೀವ್ರಗೊಂಡಿವೆ. ಈ ಮಧ್ಯೆ AIADMK ಯ ಮಾಜಿ ಸಚಿವ ಹಾಗೂ ರಾಜ್ಯಸಭಾ ಸಂಸದ C.V. ಷಣ್ಮುಗಂ ಅವರು ಮುಖ್ಯಮಂತ್ರಿ M.K. ಸ್ಟಾಲಿನ್ ವಿರುದ್ಧ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಷಣ್ಮುಗಂ ಅವರು, ಡಿಎಂಕೆ ಪಕ್ಷ ಚುನಾವಣೆಯಲ್ಲಿ ಗೆಲ್ಲಲು ಮತದಾರರಿಗೆ ಉಚಿತ ಪತ್ನಿಯರನ್ನೂ ಘೋಷಿಸಬಹುದು ಎಂದು ವ್ಯಂಗ್ಯವಾಡಿದ್ದು, ಅವರ ಹೇಳಿಕೆ ಈಗ ಭಾರಿ ವಿರೋಧಕ್ಕೆ ಗುರಿಯಾಗಿದೆ. AIADMK ಬೂತ್ ಸಮಿತಿ ತರಬೇತಿ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಯ ವೇಳೆಯಲ್ಲಿ ಹಲವು ಉಚಿತ ಕೊಡುಗೆಗಳ ಘೋಷಣೆಗಳು ಬರುತ್ತವೆ.
ಡಿಎಂಕೆ ಮಿಕ್ಸರ್, ಗ್ರೈಂಡರ್, ಮೇಕೆ, ಹಸುಗಳನ್ನು ಉಚಿತವಾಗಿ ನೀಡುವುದಾಗಿ ಹೇಳಬಹುದು. ಅದಕ್ಕಿಂತ ಮುಂದಾಗಿ ಪ್ರತಿ ವ್ಯಕ್ತಿಗೆ ಪತ್ನಿಯನ್ನೂ ನೀಡಬಹುದು ಎಂದು ವ್ಯಂಗ್ಯವಾಡಿದರು. ಅವರು ಮುಂದುವರಿದು, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರುಣಾನಿಧಿ ಅವರ ಮಗ. ಅಂತಹ ಭರವಸೆಗಳನ್ನು ನೀಡುವ ಸಾಮರ್ಥ್ಯ ಅವರಿಗಿದೆ ಎಂದು ಹೇಳಿದರು.
ಈ ಹೇಳಿಕೆಯು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಮಹಿಳಾ ಮುಖಂಡರು ಮತ್ತು ರಾಜಕೀಯ ನಾಯಕರು ಷಣ್ಮುಗಂ ಹೇಳಿಕೆಯನ್ನು ಮಹಿಳೆಯರ ಅವಮಾನ ಎಂದು ಖಂಡಿಸಿದ್ದಾರೆ. AIADMK ನಾಯಕ, ಮಾಜಿ ಮುಖ್ಯಮಂತ್ರಿ ಪಳನಿಸಾಮಿ ಈ ಹಿಂದೆ ವಿಧಿಯಲ್ ಪಯಣಂ ಬಸ್‌ಗಳನ್ನು ʼಲಿಪ್‌ಸ್ಟಿಕ್ ಲೇಪಿತ ಬಸ್‌ಗಳುʼ ಎಂದು ಕರೆದಿದ್ದಾರೆ.
ನಟಿ ಖುಷ್ಬು ಮಹಿಳಾ ಹಕ್ಕುಗಳ ಯೋಜನೆಯ ಮೊತ್ತವನ್ನು ʼಭಿಕ್ಷೆʼ ಎಂದು ಉಲ್ಲೇಖಿಸಿದ್ದು ಮತ್ತು PMK ಯ ಸೌಮ್ಯ ಅನ್ಬುಮಣಿ ಮಹಿಳೆಯರಿಗೆ ನೀಡಲಾಗುವ 1,000 ರೂ. ಮೊತ್ತವನ್ನು ಅಪಹಾಸ್ಯ ಮಾಡಿರುವುದನ್ನು ತಿರುಮಿಗು ಗೀತಾ ನೆನಪಿಸಿಕೊಂಡಿದ್ದಾರೆ. ಸ್ಟಾಲಿನ್ ನಾಯಕತ್ವದಲ್ಲಿ ತಮಿಳುನಾಡು ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ, ಶಿಕ್ಷಣಕ್ಕೆ ಒತ್ತು ನೀಡುತ್ತಿದೆ ಎಂದು ಡಿಎಂಕೆ ಒತ್ತಿ ಹೇಳಿದೆ. ಅಂತಹ ಅಭಿವೃದ್ಧಿ AIADMK ಗೆ ಇಷ್ಟವಿಲ್ಲ ಎಂದೂ ಟೀಕಿಸಿದೆ.
ವರದಿ : ಲಾವಣ್ಯ ಅನಿಗೋಳ