Spiritual Story: ನೀವು ಪತಿ-ಪತ್ನಿ ದೇವಸ್ಥಾನ ಅಂದ್ರೆ ಶಿವ-ಪಾರ್ವತಿ, ರಾಮ-ಸೀತೆ, ಇಂಥ ದೇವಸ್ಥಾನದ ಬಗ್ಗೆ ಕೇಳಿರುತ್ತೀರಿ, ಹೋಗಿರುತ್ತೀರಿ. ಇನ್ನು ಅಣ್ಣ ತಂಗಿ ದೇವಸ್ಥಾನವೆಂದರೆ, ಪುರಿ ಜಗನ್ನಾಥ ದೇವಸ್ಥಾನ. ತಾಯಿ ಮಗನ ದೇವಸ್ಥಾನ ಅಂದ್ರೆ, ಗಣಪತಿ ಪಾರ್ವತಿ ದೇವಸ್ಥಾನ ಇಂಥ ದೇವಸ್ಥಾನಗಳು. ಆದ್ರೆ ನೀವು ಯಾವತ್ತಾದರೂ ಅತ್ತೆ-ಸೊಸೆ ದೇವಸ್ಥಾನದ ಬಗ್ಗೆ ಕೇಳಿದ್ದೀರಾ..? ಇದು ಎಲ್ಲಿದೆ ಅಂತಾ ನಿಮಗೆ ಗೊತ್ತಾ..? ಗೊತ್ತಿಲ್ಲದಿದ್ದಲ್ಲಿ, ಆ ಬಗ್ಗೆ ಸಂಪೂರ್ಣ ಮಾಹಿತಿ ನಾವು ಕೊಡುತ್ತೇವೆ.
ರಾಜಸ್ತಾನದ ಉದಯಪುರದಲ್ಲಿ ಈ ಅತ್ತೆ ಸೊಸೆ ದೇವಸ್ಥಾನವಿದ್ದು, ಇಲ್ಲಿ ವಿಷ್ಣು ಮತ್ತು ಶಿವನನ್ನು ಪೂಜಿಸಲಾಗುತ್ತದೆ. 10ನೇ ಶತಮಾನದಲ್ಲಿ ರಾಜನೋರ್ವ ತನ್ನ ಪತ್ನಿ ಮತ್ತು ಸೊಸೆಗಾಗಿ ಈ ದೇವಸ್ಥಾನ ನಿರ್ಮಿಸಿದ. ಹಾಗಾಗಿ ಇದನ್ನು ಸಾಸ್-ಬಹು ಅಂದ್ರೆ ಅತ್ತೆ ಸೊಸೆ ದೇವಸ್ಥಾನವೆಂದು ಹೇಳಲಾಗುತ್ತದೆ. ಇಲ್ಲಿನ ರಾಜರೊಬ್ಬರು ನಾಗ ವಾಸ್ತುಶಿಲ್ಪದಲ್ಲಿ ಈ ದೇವಸ್ಥಾನವನ್ನು ನಿರ್ಮಿಸಿದ್ದಾರೆ.
ಇನ್ನು ಇಲ್ಲಿ ಶಿವ ಮತ್ತು ವಿಷ್ಣುವನ್ನು ಪೂಜಿಸಲಾಗುತ್ತಿದ್ದರೂ, ಇದನ್ನು ಅತ್ತೆ- ಸೊಸೆ ದೇವಸ್ಥಾನವೆಂದು ಏಕೆ ಕರೆಯುತ್ತಾರೆ ಎಂದರೆ, ಈ ದೇವಸ್ಥಾನವನ್ನು ಅತ್ತೆ ಮತ್ತು ಸೊಸೆಗಾಗಿ ನಿರ್ಮಿಸಲಾಗಿದೆ. ಮಹಾರಾಜರ ಪತ್ನಿ ವಿಷ್ಣು ಭಕ್ತೆಯಾಗಿದ್ದರು. ಹಾಗಾಗಿ ಮಹಾರಾಜ ಪತ್ನಿಗಾಗಿ ವಿಷ್ಣು ದೇವಸ್ಥಾನ ನಿರ್ಮಿಸಿದ. ಪುತ್ರನಿಗೆ ವಿವಾಹವಾಗಿ ಸೊಸೆ ಬಂದಳು. ಆಕೆ ಶಿವಭಕ್ತೆ ಹಾಗಾಗಿ ಆಕೆಗೆ ಶಿವನ ದೇವಸ್ಥಾನ ನಿರ್ಮಿಸಿ ಕೊಡಲಾಯಿತು. ಹಾಗಾಗಿ ಇದನ್ನು ಅತ್ತೆ –ಸೊಸೆ ದೇವಸ್ಥಾನವೆಂದು ಕರೆಯಲಾಗುತ್ತದೆ.
ಈ ಎರಡು ದೇವಸ್ಥಾನದಲ್ಲಿ ಒಂದು ದೇವಸ್ಥಾನ ದೊಡ್ಡದಿದೆ. ಇನ್ನೊಂದು ದೇವಸ್ಥಾನ ಚಿಕ್ಕದಿದೆ. ದೊಡ್ಡ ದೇವಸ್ಥಾನ ಅತ್ತೆಗಾದರೆ, ಚಿಕ್ಕ ದೇವಸ್ಥಾನ ಸೊಸೆಗೆಂದು ನಿರ್ಮಿಸಲಾಗಿತ್ತು. ಇಲ್ಲಿಗೆ ಬರುವ ಭಕ್ತರು ಹರಿ ಹರ ಇಬ್ಬರನ್ನೂ ಪೂಜಿಸಬಹುದು.