ರಾಜ್ಯದ ರಾಜಧಾನಿ ಬೆಂಗಳೂರು ತೀವ್ರ ಜನಸಂಖ್ಯಾ ಸ್ಫೋಟದತ್ತ ಸಾಗುತ್ತಿದೆ. 2031ರ ವೇಳೆಗೆ ನಗರದ ಜನಸಂಖ್ಯೆ ಸುಮಾರು 1.47 ಕೋಟಿಗೆ ಏರಿಕೆಯಾಗುವ ಸಾಧ್ಯತೆ ಇದೆ. ಈಗಂತ ಅರ್ಥಶಾಸ್ತ್ರ ಮತ್ತು ಸಾಂಖ್ಯಿಕ ನಿರ್ದೇಶನಾಲಯ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ. ಇದೆ ವೇಗದಲ್ಲಿ ಸಾಗಿದರೆ, ನಗರದ ಜನಸಂಖ್ಯೆ ಒಂದೂವರೆ ಕೋಟಿ ಗಡಿಯನ್ನು ದಾಟುವುದು ಅನುಮಾನವಿಲ್ಲ ಎನ್ನಲಾಗಿದೆ.
2021ರ ಅಂಕಿಅಂಶಗಳ ಪ್ರಕಾರ, ಬೆಂಗಳೂರಿನ ಜನಸಂಖ್ಯೆ ಸುಮಾರು 1.22 ಕೋಟಿಯಾಗಿದ್ದು, 2031ರ ವೇಳೆಗೆ ಇದು 1.47 ಕೋಟಿಗೆ ಏರಿಕೆಯಾಗಲಿದೆ. ವಿಶೇಷವಾಗಿ 2025 ಮತ್ತು 2026ರ ನಡುವೆ ಬೆಂಗಳೂರು 1.93% ರಷ್ಟು ಬೆಳವಣಿಗೆಯಾಗಲಿದೆ ಎಂಬ ನಿರೀಕ್ಷೆಯಿದೆ. ಇದು ರಾಜ್ಯದ ಇತರ ಎಲ್ಲಾ ನಗರಗಳಿಗಿಂತ ಹೆಚ್ಚು ಎನ್ನುವುದು ಗಮನಾರ್ಹವಾಗಿದೆ.
ನಗರದಲ್ಲಿ ಈ ತೀವ್ರ ಜನಸಂಖ್ಯೆ ಏರಿಕೆಗೆ ಪ್ರಮುಖ ಕಾರಣವೆಂದರೆ ಉದ್ಯೋಗಾವಕಾಶಗಳು ಮತ್ತು ಐಟಿ-ಬಿಟಿ ಕ್ಷೇತ್ರದ ವಿಸ್ತರಣೆ. ದೇಶದ ನಾನಾ ಭಾಗಗಳೊಂದಿಗೆ ರಾಜ್ಯದ ಒಳಜಿಲ್ಲೆಗಳಿಂದಲೂ ಜೀವನೋಪಾಯಕ್ಕಾಗಿ ಜನರು ಹೆಚ್ಚಾಗಿ ಬೆಂಗಳೂರಿಗೆ ವಲಸೆ ಬರುತ್ತಿದ್ದಾರೆ ಎಂದು DES ಜಂಟಿ ನಿರ್ದೇಶಕ ಕೆ. ನರಸಿಂಹ ಫಣಿ ತಿಳಿಸಿದ್ದಾರೆ.
2021ರ ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಬೆಂಗಳೂರು ಭಾಗಶಃ ಶೇ.18.2 ಇದ್ದರೆ, 2031ರ ವೇಳೆಗೆ ಅದು ಶೇ.20.7ಕ್ಕೆ ಏರಿಕೆಯಾಗಲಿದೆ. ಇದು ಬೆಂಗಳೂರಿನ ಮೇಲಿನ ಜನದಟ್ಟಣೆಯ ಒತ್ತಡವನ್ನು ತೋರಿಸುತ್ತದೆ. ಇದರ ಬೆನ್ನಲ್ಲೇ, ರಾಜ್ಯದ ಇತರ ನಗರಗಳನ್ನು ಸಮತೋಲನದಿಂದ ಅಭಿವೃದ್ಧಿಪಡಿಸುವ ಅಗತ್ಯವನ್ನು ಈ ವರದಿ ಒತ್ತಿ ಹೇಳುತ್ತಿದೆ.
ಈ ತ್ವರಿತ ಬೆಳವಣಿಗೆಯು ಈಗಾಗಲೇ ಈಗಿರುವಂತಹ ಮೂಲಸೌಕರ್ಯಗಳ ಮೇಲೆ ತೀವ್ರ ಒತ್ತಡವನ್ನುಂಟು ಮಾಡುತ್ತಿದೆ. ನಗರ ಗಡಿಗಳ ಅತಿರೇಕದ ವಿಸ್ತರಣೆ ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗಬಹುದು. ಮೂಲಸೌಕರ್ಯಗಳ ಮೇಲಿನ ಭಾರ, ರಸ್ತೆಗಳು, ಕುಸಿಯುತ್ತಿರುವ ಮೆಟ್ರೋ ವ್ಯವಸ್ಥೆ, ನೀರಿನ ಕೊರತೆ, ತ್ಯಾಜ್ಯ ನಿರ್ವಹಣೆಯ ವಿಫಲತೆ ಇವುಗಳನ್ನು ಬೆಳವಣಿಗೆಯೊಂದಿಗೆ ಪೈಪೋಟಿ ನಡೆಸಬೇಕಾಗುತ್ತಿದೆ.
ವರದಿ : ಲಾವಣ್ಯ ಅನಿಗೋಳ