ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನದ ಜಟಾಪಟಿ ಇನ್ನು ನಿಂತಿಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ವಿಚಾರದ ಚರ್ಚೆಗೆ ಇನ್ನು ಬ್ರೇಕ್ ಬಿದ್ದಂತಿಲ್ಲ. ಮುಖ್ಯಮಂತ್ರಿ ಸ್ಥಾನ ನಿರ್ಧಾರ ಹೈಕಮಾಂಡ್ ಕೈಯಲ್ಲಿದೆ ಎಂದಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಇದೀಗ ಶಾಸಕರ ಮತ್ತು ಸಚಿವರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಕೆಲವೊಂದು ಮಾಹಿತಿಯ ಪ್ರಕಾರ, ಡಿಕೆಶಿ ಅವರು ಇತ್ತೀಚೆಗೆ ಸಚಿವರು ಮತ್ತು ಶಾಸಕರೊಂದಿಗೆ ಬಿರುಸಿನ ಮಾತುಕತೆ ಆರಂಭಿಸಿದ್ದಾರೆ. ಕೆಲವರನ್ನು ಖುದ್ದಾಗಿ ಭೇಟಿಯಾಗಿದ್ದಾರೆ. ಕೆಲವರ ಜೊತೆ ದೂರವಾಣಿ ಮಾತುಕತೆ ಮೂಲಕ ಅವರ ಸಮಸ್ಯೆಗಳ ಪರಿಹಾರವನ್ನೇ ನೆಪ ಮಾಡಿಕೊಂಡು ವಿಶ್ವಾಸ ಗೆಲ್ಲುವ ಪ್ರಯತ್ನ ನಡೆಸುತ್ತಿದ್ದಾರೆ.
ಡಿಕೆ ಶಿವಕುಮಾರ್ ಕೆಲ ಶಾಸಕರಿಗೆ ನೇರವಾಗಿ ಕರೆ ಮಾಡಿ ಅವರ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಕೇಳುತ್ತಿದ್ದಾರೆ. ಏನೇ ಸಮಸ್ಯೆಗಳಿದ್ದರೂ ಬಗೆಹರಿಸಿಕೊಡ್ತೀನಿ ಎಂಬ ಭರವಸೆಯೊಂದಿಗೆ ಅವರು ಶಾಸಕರಿಗೆ ನಿಕಟವಾಗಲು ಯತ್ನಿಸುತ್ತಿರುವುದು ವರದಿಯಾಗಿದೆ. ಕೆಲ ಸಚಿವರನ್ನು ತಮ್ಮ ನಿವಾಸದಲ್ಲಿ ಅಥವಾ ಬೇರೆ ಸ್ಥಳಗಳಲ್ಲಿ ಭೇಟಿಯಾಗಿ ಅವರೊಂದಿಗೆ ಪ್ರತ್ಯೇಕ ಚರ್ಚೆ ನಡೆಸುತ್ತಿರುವುದೂ ಗಮನಕ್ಕೆ ಬಂದಿದೆ.
ಇದನ್ನೆಲ್ಲಾ ನೋಡಿದ ಮೇಲೆ ರಾಜಕೀಯ ವಲಯದಲ್ಲಿ ಇದು ಸಿಎಂ ಗಾದಿಗೆ ಹಾದಿ ಸಿದ್ಧಪಡಿಸುವ ರಣತಂತ್ರವೇ? ಎಂಬ ಒಂದು ಪ್ರಶ್ನೆ ಮೂಡಿದೆ. ಇತ್ತೀಚೆಗೆ ಡಿಕೆಶಿ ದೆಹಲಿ ಪ್ರವಾಸಗಳು, ಟೆಂಪಲ್ ರನ್‌ಗಳು, ಜೊತೆಗೆ ಬೆಂಗಳೂರಿನಲ್ಲಿ ನಡಿಗೆ ಮಾಡುವ ಮೂಲಕ ಜನರ ಗಮನ ಸೆಳೆಯುತ್ತಿದ್ದಾರೆ. ಎಲ್ಲವೂ ಸೇರಿ ಒಂದು ರಾಜಕೀಯ ಒಳಪ್ರವಾಹವನ್ನು ಸೃಷ್ಟಿಸುತ್ತಿವೆ. ಡಿಕೆಶಿ ತಮ್ಮ ಸಿಎಂ ಆಕಾಂಕ್ಷೆಯ ಬಗ್ಗೆ ನೇರವಾಗಿ ಯಾವುದೂ ಹೇಳುತ್ತಿಲ್ಲ. ಆದರೆ ಅವರು ಕೈಗೊಂಡಿರುವ ನಡವಳಿಕೆಗಳು ಆ ಕನಸಿಗೆ ದಾರಿ ಸಿದ್ಧಪಡಿಸುತ್ತಿರುವ ಶಂಕೆ ಇದೆ.
ಅದೇರೀತಿ ಈಗ DCM ಡಿ.ಕೆ. ಶಿವಕುಮಾರ್ ಟೆಂಪಲ್ ರನ್ ಮುಂದುವರೆಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಹಾಸನಾಂಬ ದೇವಿ ದರ್ಶನ ಮಾಡಿದ್ರು. ಈಗ ಮಂತ್ರಾಲಯಕ್ಕೆ ತೆರಳಿದ್ದಾರೆ. ರಾಯರ ದರ್ಶನ ಪಡೆದಿದ್ದಾರೆ. ಪತ್ನಿ ಉಷಾ ಜೊತೆ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದು, ವರ್ಷಕ್ಕೊಮ್ಮೆ ನಡೆಯುವ ಮೂಲ ರಾಮದೇವರ ಮಹಾ ಅಭಿಷೇಕದಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ ನಾಡಿನ ಸಮಸ್ತ ಜನತೆಯ ಒಳಿತಿಗಾಗಿ, ಎಲ್ಲರ ಸುಖ-ಶಾಂತಿಗಾಗಿ ರಾಯರಲ್ಲಿ ಪ್ರಾರ್ಥಿಸಿದ್ದೇನೆಂದು ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಮಂಚಾಲಮ್ಮ ದೇವಿಯ ದರ್ಶನವನ್ನೂ ಮಾಡಿದ್ದಾರೆ. ಬಳಿಕ ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಶ್ರೀಗಳ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ಡಿಕೆಶಿ, ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ವೇಳೆ ನಾನು ಶ್ರೀಮಠಕ್ಕೆ ಆಗಮಿಸಿದ್ದೆ. ಆಗ ಮಾಡಿದ್ದ ಸಂಕಲ್ಪದಿಂದಾಗಿ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಶ್ರೀಮಠದಿಂದ ಮಂತ್ರಾಲಯಕ್ಕೆ ಬರಲು ಆಹ್ವಾನವಿತ್ತು.
ರಾಯರ ಅನುಗ್ರಹಕ್ಕಾಗಿ ಬಹಳ ದಿನಗಳಿಂದ ಬರಬೇಕು ಅಂದುಕೊಂಡಿದ್ದೆ. ಗುರುಗಳ ಅನುಗ್ರಹ ಅವಶ್ಯಕ. ಇಂದು ವಿಶೇಷ ದಿನವಾಗಿದ್ದು, ಶ್ರೀಮಠದ ಭೂಮಿ ಪೂಜೆ ಕಾರ್ಯಕ್ರಮದಲ್ಲೂ ಭಾಗಿಯಾಗಿರುವುದಾಗಿ ಹೇಳಿದ್ರು. ಇನ್ನು ಹಾಸನಾಂಬೆ ದೇವಿ ಎದುರು ಕುಳಿತಿದ್ದ ಡಿಕೆಶಿ, ಖಡ್ಗಮಾಲಾ ಮತ್ತು ನಾರಾಯಣ ಸ್ತೋತ್ರ ಪಠಿಸಿದ್ರು. ಕೈಮುಗಿದು ಕುಳಿತಿದ್ದ ಡಿಕೆಶಿಗೆ, ಹಾಸನಾಂಬೆ 2 ಬಾರಿ ಹೂವಿನ ಪ್ರಸಾದ್ ಕೊಟ್ಟಿದ್ರು.
ಇದು ಡಿಕೆಶಿ ಕನಸಿಗೆ ಪುಷ್ಠಿ ಕೊಟ್ಟಿತ್ತು. ಈಗ ಮಂತ್ರಾಲಯಕ್ಕೆ ಭೇಟಿ ಕೊಟ್ಟಿದ್ದಾರೆ. ಮತ್ತೊಂದು ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ, ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲೂ ಸ್ಥಳೀಯ ದೇಗುಲಗಳಿಗೂ ಭೇಟಿ ಕೊಡ್ತಿದ್ದು, ದೇವರ ದರ್ಶನ ಪಡೀತಿದ್ದಾರೆ. ನವೆಂಬರ್ ಕ್ರಾಂತಿ ಚರ್ಚೆ ಬೆನ್ನಲ್ಲೇ ಡಿಕೆಶಿ ಟೆಂಪಲ್ ರನ್ ಭಾರೀ ಕುತೂಹಲ ಮೂಡಿಸಿದೆ.
ಡಿಕೆಶಿ ಬಗ್ಗೆ ಶಾಸಕರ ಒಲವಿಲ್ಲ ಎಂಬ ಅಭಿಪ್ರಾಯ ಇದೆ. ಅಲ್ಲದೆ , ಬಹುತೇಕ ಸಚಿವರು ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ವಾದ ಮಂಡನೆ ಮಾಡುತ್ತಿದ್ದಾರೆ. ಉಳಿದ ಎರಡುವರೆ ವರ್ಷಗಳ ಕಾಲ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರಿಯುತ್ತಾರೆ ಎಂದು ಹಲವು ಸಚಿವರು ಹೇಳಿಕೆ ನೀಡಿದ್ದಾರೆ. ಡಿಕೆಶಿ ಈಗಾಗಲೇ ಮಾಧ್ಯಮಗಳಲ್ಲಿ ಸಿಎಂ ಬದಲಾವಣೆ ಸಂಬಂಧ ಬರುವ ಸುದ್ದಿಗಳನ್ನು ನಿರಾಕರಿಸಿದ್ದಾರೆ.
ಅವರು ಸಿಎಂ ಆಕಾಂಕ್ಷಿ ಎನ್ನುವುದನ್ನು ಎಲ್ಲಿಯೂ ಘೋಷಿಸಿಲ್ಲ. ಆದರೆ, ಶಾಸಕರು, ಸಚಿವರೊಂದಿಗೆ ತೀವ್ರ ಸಂಪರ್ಕ ಕಾಯ್ದುಕೊಳ್ಳುತ್ತಿರುವುದು ಅವರ ಅಂತರಂಗದ ತಂತ್ರವನ್ನು ಬಹಿರಂಗ ಪಡಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ತಂತ್ರಗಾರಿಕೆ ಎಷ್ಟು ಯಶಸ್ವಿಯಾಗುತ್ತದೆ ಎಂಬುದನ್ನು ಕಾಲವೇ ತೀರ್ಮಾನಿಸಬೇಕಿದೆ.
ವರದಿ : ಲಾವಣ್ಯ ಅನಿಗೋಳ