ಭಾರತದ ನಂ.1 ಮಹಿಳೆ ಯಾರು ಗೊತ್ತಾ?

ಫೋರ್ಬ್ಸ್ ಮ್ಯಾಗಜಿನ್ 2025ರ ವಿಶ್ವದ ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತದ ಅತ್ಯಂತ ಪ್ರಭಾವಿ ಮಹಿಳೆಯಾಗಿ ಅಗ್ರಸ್ಥಾನ ಪಡೆದಿದ್ದಾರೆ.

ಭಾರತದಿಂದ ಈ ಪಟ್ಟಿಯಲ್ಲಿ ಮೂವರು ಮಹಿಳೆಯರು ಸ್ಥಾನ ಪಡೆದುಕೊಂಡಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 24ನೇ ಸ್ಥಾನ, HCL ಟೆಕ್ನಾಲಜೀಸ್ CEO ರೋಶನಿ ನಾಡಾರ್ 76ನೇ ಸ್ಥಾನ ಮತ್ತು ಬಯೋಕಾನ್ ಸಂಸ್ಥೆಯ ಸ್ಥಾಪಕಿ ಕಿರಣ್ ಮಜುಂದಾರ್ ಶಾ 83ನೇ ಸ್ಥಾನ ಪಡೆದಿದ್ದಾರೆ. ಜಾಗತಿಕ ಮಟ್ಟದಲ್ಲಿ ಮೊದಲ ಸ್ಥಾನವನ್ನು ಯುರೋಪಿಯನ್ ಕಮಿಷನ್‌ನ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇನ್ ಪಡೆದುಕೊಂಡಿದ್ದಾರೆ.

ಹಾಗಾದ್ರೆ ನಿರ್ಮಲಾ ಸೀತಾರಾಮನ್ ಅವರ ಸಾಧನೆ ಏನು? ಅನ್ನೋದನ್ನ ನೋಡೋದಾದ್ರೆ ನಿರ್ಮಲಾ ಸೀತಾರಾಮನ್ ಅವರು ಭಾರತದ ಎರಡನೇ ಮಹಿಳಾ ವಿತ್ತ ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ ಸತತವಾಗಿ ಎಂಟನೇ ಬಾರಿ ಕೇಂದ್ರ ಬಜೆಟ್ ಮಂಡಿಸಿರುವ ಸಾಧನೆಗೂ ಪಾತ್ರರಾಗಿದ್ದಾರೆ.

ಆರ್ಥಿಕ ನೀತಿ ರೂಪಿಸುವುದು, ರಾಷ್ಟ್ರದ ಹಣಕಾಸು ನಿರ್ವಹಣೆ, ತೆರಿಗೆ ಸುಧಾರಣೆ ಹಾಗೂ ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿರುವುದನ್ನು ಗಮನಿಸಿ ಫೋರ್ಬ್ಸ್ ಮ್ಯಾಗಜಿನ್ ಈ ಗೌರವ ನೀಡಿದೆ.

ಇನ್ನೊಂದೆಡೆ, ರೋಶನಿ ನಾಡಾರ್ ಹಾಗೂ ಕಿರಣ್ ಮಜುಂದಾರ್ ಶಾ ಅವರು ಸ್ವಂತ ಸಾಮರ್ಥ್ಯದಿಂದ ಯಶಸ್ಸು ಗಳಿಸಿದ ಉದ್ಯಮ ನಾಯಕಿಯರಾಗಿದ್ದು, ಭಾರತೀಯ ಮಹಿಳಾ ಉದ್ಯಮಶೀಲತೆಯ ಶಕ್ತಿಯನ್ನು ಜಾಗತಿಕ ವೇದಿಕೆಯಲ್ಲಿ ಪ್ರತಿಬಿಂಬಿಸಿದ್ದಾರೆ. ಈ ಮೂಲಕ 2025ರ ಫೋರ್ಬ್ಸ್ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಭಾರತದ ಹೆಸರು ಮತ್ತೊಮ್ಮೆ ವಿಶ್ವಮಟ್ಟದಲ್ಲಿ ಮೆರೆಯುವಂತಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author