ಇಸ್ರೇಲ್ ಮತ್ತು ಹಮಾಸ್ ನಡುವಿನ ದೀರ್ಘಗಾಲದ ಕದನಕ್ಕೆ ಶಾಂತಿಯ ಬೆಳಕು ಕಾಣುತ್ತಿದೆ. ಅಕ್ಟೋಬರ್ 7, 2023 ರಂದು ಹಮಾಸ್ ಉಗ್ರರ ದಾಳಿ ನಂತರ ಗಾಜಾದಿಂದ ಅಪಹರಿಸಲ್ಪಟ್ಟ 251 ಇಸ್ರೇಲಿ ನಾಗರಿಕರಲ್ಲಿ ಉಳಿದ 20 ಜೀವಂತ ಒತ್ತೆಯಾಳುಗಳಿಗೆ ಮನೆಗೆ ಮರಳಲು ಅವಕಾಶ ಸಿಕ್ಕಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯ ನಂತರ, ಹಮಾಸ್ ಇಂದು ಮೊದಲ ಹಂತವಾಗಿ 7 ಒತ್ತೆಯಾಳುಗಳನ್ನು ರೆಡ್ ಕ್ರಾಸ್ ಬಳಿ ಬಿಟ್ಟಿದ್ದು, ಉಳಿದ 13 ಒತ್ತೆಯಾಳುಗಳ ಬಿಡುಗಡೆ ಮುಂದಿನ ಹಂತಗಳಲ್ಲಿ ಸಂಭವಿಸಲಿದೆ.
ಇಸ್ರೇಲ್‌ನಲ್ಲಿ ಒತ್ತೆಯಾಳುಗಳ ಮನೆಗೆ ಮರಳುವ ಸುದ್ದಿಯನ್ನು ಕೇಳಿ, ಸಾರ್ವಜನಿಕರು ಹರ್ಷೋದ್ಘಾರದಿಂದ ಬಾವುಟ ಬೀಸುತ್ತಾ, ಬಿಗಿ ಭದ್ರತೆಯಲ್ಲಿ ಅವರನ್ನು ಸ್ವಾಗತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ಸಂಸತ್ತಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಗಮಿಸುತ್ತಿದ್ದಂತೆ ಎದ್ದು ನಿಂತು ಚಪ್ಪಾಳೆ ತಟ್ಟಲಾಯಿತು, ಅಲ್ಲಿ ಅವರನ್ನು ಶಾಸಕರು ದೀರ್ಘ ಚಪ್ಪಾಳೆ ಮತ್ತು ಆತ್ಮೀಯ ಮೆಚ್ಚುಗೆಯೊಂದಿಗೆ ಸ್ವಾಗತಿಸಿದರು. ಭಾಷಣದ ವೇಳೆ ತಮ್ಮಿಂದಲೇ ಈ ಯುದ್ಧ ನಿಂತಿದೆ ಅಂತ ಹೇಳಿಕೊಂಡಿದ್ದಾರೆ.
ಅಕ್ಟೋಬರ್ 2023 ರಿಂದ ಇಸ್ರೇಲ್ ನಡೆಸುತ್ತಿರುವ ಗಾಜಾ ಯುದ್ಧದಲ್ಲಿ ಕನಿಷ್ಠ 67,869 ಜನರು ಸಾವನ್ನಪ್ಪಿದ್ದಾರೆ ಮತ್ತು 170,105 ಜನರು ಗಾಯಗೊಂಡಿದ್ದಾರೆ. ಅಕ್ಟೋಬರ್ 7, 2023 ರ ದಾಳಿಯ ಸಮಯದಲ್ಲಿ ಇಸ್ರೇಲ್‌ನಲ್ಲಿ ಒಟ್ಟು 1,139 ಜನರು ಸಾವನ್ನಪ್ಪಿದರು ಮತ್ತು ಸುಮಾರು 200 ಜನರನ್ನು ಸೆರೆಯಾಳುಗಳನ್ನಾಗಿ ಮಾಡಲಾಯಿತು. ಇನ್ನೂ ಅನೇಕರು ಅಲ್ಲೇ ದುರಂತವಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ಇದೀಗ 2 ವರ್ಷಗಳ ನಂತರ, ಉಳಿದ 20 ಜೀವಂತ ಒತ್ತೆಯಾಳುಗಳು ಮನೆಗೆ ಮರಳಲಿದ್ದಾರೆ.
ವರದಿ : ಲಾವಣ್ಯ ಅನಿಗೋಳ