ಚೀನಾ ಮೇಲೆ ಅಮೆರಿಕ ವಿಧಿಸುತ್ತಿರುವ ಶೇಕಡ 57ರಷ್ಟು ಸುಂಕವನ್ನು, ಶೇಕಡ 47ಕ್ಕೆ ಇಳಿಸಲು, ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದಾರೆ. ಸೌಥ್ ಕೊರಿಯಾದ ಬುಸನ್ ನಗರದಲ್ಲಿ ನಡೆಯುತ್ತಿರುವ ಎಪಿಇಸಿ ಶೃಂಗಸಭೆಗೆ ಮುನ್ನ, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನ ಟ್ರಂಪ್ ಭೇಟಿಯಾಗಿದ್ದಾರೆ.
ಈ ವೇಳೆ ಟ್ರೇಡ್ ಡೀಲ್ ಮಾತುಕತೆ ಅಂತಿಮಗೊಳಿಸಿರುವುದು ತಿಳಿದು ಬಂದಿದೆ. ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಚೀನಾ ಮೇಲಿನ ಟ್ಯಾರಿಫ್ ಅನ್ನು ಶೇಕಡ 10ರಷ್ಟು ಇಳಿಸುತ್ತಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಚೀನಾ ಅಧ್ಯಕ್ಷರ ಭೇಟಿಯನ್ನು ಅದ್ಭುತ ಎಂದು ಟ್ರಂಪ್ ಹೊಗಳಿದ್ದಾರೆ. ತಮ್ಮಿಬ್ಬರ ದೇಶಗಳ ಮಧ್ಯೆ ವ್ಯಾಪಾರ ಮತ್ತು ಸಹಕಾರ ಕ್ಷೇತ್ರದಲ್ಲಿ ಹಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಚೀನಾದ ಫೆಂಟಾನಿಲ್ ಸಂಬಂಧಿತ ಸರಕುಗಳ ಆಮದು ಮೇಲೆ, ಅಮೆರಿಕದ ಟ್ಯಾರಿಫ್ ಅನ್ನು ಶೇಕಡ 20ರಿಂದ ಶೇಕಡ 10ಕ್ಕೆ ಇಳಿಸಲಾಗುತ್ತದೆ. ಇದರಿಂದ ಒಟ್ಟಾರೆ ಟ್ಯಾರಿಫ್ ದರ ಶೇಕಡ 47ಕ್ಕೆ ಇಳಿಯುತ್ತದೆ. ಇದಕ್ಕೆ ಪ್ರತಿಯಾಗಿ, ಚೀನಾ ಜೊತೆ ಅಮೆರಿಕ ವಿರಳ ಭೂ ಖನಿಜಗಳಿಗಾಗಿ, ಒಂದು ವರ್ಷದ ಡೀಲ್ ಮಾಡಿಕೊಂಡಿದೆ. ಸೋಯಾಬೀನ್ ಸೇರಿದಂತೆ ಅಮೆರಿಕ ಕೃಷಿ ಉತ್ಪನ್ನಗಳನ್ನು ಖರೀದಿಸಲು ಚೀನಾ ಒಪ್ಪಿದೆ. ಅಕ್ರಮ ಫೆಂಟಾನಿಲ್ ವ್ಯಾಪಾರವನ್ನು ನಿಯಂತ್ರಿಸಲು, ಚೀನಾ ಕ್ರಮ ತೆಗೆದುಕೊಳ್ಳಲಿದೆ ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಆದರೆ, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಅಮೆರಿಕ ಸರ್ಕಾರದಿಂದಲೂ ಕೂಡ ಅಧಿಕೃತವಾಗಿ ಯಾವುದೇ ಮಾಹಿತಿ ಪ್ರಕಟವಾಗಿಲ್ಲ. ಮತ್ತೊಂದು ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ, ಏಪ್ರಿಲ್ ತಿಂಗಳಲ್ಲಿ ಚೀನಾಗೆ ಟ್ರಂಪ್ ಪ್ರವಾಸ ಕೈಗೊಳ್ಳಲಿದ್ದಾರಂತೆ. ಇದಾದ ಬಳಿಕ ಅಮೆರಿಕಾಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೋಗಲಿದ್ದಾರಂತೆ.
ಚೀನಾದ ಟಿಯಾಂಜಿನ್ನಲ್ಲಿ ಪ್ರಧಾನಿ ಮೋದಿ, ರಷ್ಯಾ ಅಧ್ಯಕ್ಷ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ರು. ಈ ಸಭೆಗೂ ಮುನ್ನ ನಿರಾಂಕುಶ ಅಧಿಕಾರಿಯಂತೆ ವರ್ತಿಸುತ್ತಿದ್ದ ಟ್ರಂಪ್, ಸಭೆ ಬಳಿಕ ಸ್ವಲ್ಪ ಮೆತ್ತಗಾದಂತೆ ಕಾಣಿಸ್ತಿದೆ.

