ಬಿಡದಿ ಟೌನ್‌ಶಿಪ್ ಯೋಜನೆ ಕುರಿತ ವಿವಾದ ತೀವ್ರಗೊಳ್ಳುತ್ತಿದೆ. ರೈತರಿಂದ ಭಾರಿ ವಿರೋಧ ವ್ಯಕ್ತವಾಗಿರುವ ಈ ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ವಾಕ್ ಸಮರ ಜೋರಾಗಿದೆ. ಬಿಡದಿ ವ್ಯಾಪ್ತಿಯಲ್ಲಿ ನೂರಾರು ಎಕರೆ ಜಮೀನುಗಳನ್ನು ಅಕ್ರಮವಾಗಿ ನೋಂದಣಿ ಮಾಡಿಕೊಂಡು ಕಾಂಗ್ರೆಸ್ ನಾಯಕರು ಹಾಗೂ ಅಧಿಕಾರಿಗಳು ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ. ಅಲ್ಲದೆ ಕಾಂಗ್ರೆಸ್ ನಾಯಕ ಡಿಕೆ.ಸುರೇಶ್ ಅವರ ಮಾತಿಗೆ ತಿರುಗೇಟು ನೀಡಿದೆ.
ಡಿ.ಕೆ. ಸುರೇಶ್ ಅವರೆ, ಪದೇಪದೇ ಸುಳ್ಳು ಹೇಳುವ ಚಾಳಿ ನಿಮಗೆ ಏಕೆ? ಬಡ ರೈತರ ಜಮೀನುಗಳನ್ನು ಕೊಳ್ಳೆ ಹೊಡೆದು ಕೋಟೆ ಕಟ್ಟಿಕೊಳ್ಳಲು ಸುಳ್ಳಿನ ಕಥೆಗಳನ್ನು ಕಟ್ಟುವುದು ಏಕೆ? ಬಿಡದಿ ಟೌನ್‌ಶಿಪ್ ಬಗ್ಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಯಾವುದೇ ವಿಷಯವನ್ನೂ ಮುಚ್ಚಿಟ್ಟಿಲ್ಲ ಎಂಬುದನ್ನು ತಿಳಿದುಕೊಳ್ಳಿ. ರೈತರನ್ನು ಹಲವು ಬಾರಿ ಸಭೆಗೆ ಕರೆಯಲಾಗಿದೆ. ಆದರೆ, ನಿಮ್ಮ ಯೋಗ್ಯತೆಗೆ ನೀವು ರೈತರ ಜೊತೆ ಒಂದೇ ಸಭೆಯನ್ನಾದರೂ ನಡೆಸಿದ್ದೀರಾ? ಎಂದು ಪ್ರಶ್ನಿಸಿದೆ.
ಅದೇ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗಲೇ ರೈತರನ್ನು 3-4 ಸಲ ಕೃಷ್ಣ ಕಚೇರಿಗೇ ಕರೆಸಿ ಸಭೆ ನಡೆಸಿದ್ದರು ಅನ್ನೋದು ನಿಮಗ್ ಗೊತ್ತಾ? ಈ ಯೋಜನೆ ವಿರುದ್ಧ ನಿಮ್ಮದೇ ಕಾಂಗ್ರೆಸ್ ಪಕ್ಷದ H.K. ಪಾಟೀಲ್, V.S. ಉಗ್ರಪ್ಪ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದರು. ಅಗೆದು ಬಗೆದೂ ಹೊರತೆಗೆದ ಸತ್ಯಶೋಧನಾ ವರದಿ ಏನಾಯಿತು? ಅಂದು ರಾಮನಗರ ಜಿಲ್ಲೆಯ ಕಾಂಗ್ರೆಸ್ ನಾಯಕರೇ ವಿರೋಧ ಮಾಡಿದರಲ್ಲಾ? ಅವರೆಲ್ಲ ಈಗ ಎಲ್ಲಿ ಹೋಗಿ ಅವಿತಿದ್ದಾರೆ? ಎಂದು ಕೇಳಿದೆ.
ಟೌನ್‌ಶಿಪ್ ಬಗ್ಗೆ ಸುಳ್ಳಿನ ಮೇಲೆ ಸುಳ್ಳು ಕಥೆಗಳನ್ನು ಸೃಷ್ಟಿಸುತ್ತಿದ್ದೀರಿ. ಆದರೆ ಜೆಡಿಎಸ್ ಸದಾ ಸತ್ಯದ ಪರ ನಿಂತಿದೆ. ರೈತರ ಪರ ನಿಂತಿದೆ. ನೀವು ಹೋಗಬೇಕಿರುವುದು ರೈತರ ಪರದ ಮಾರ್ಗದಲ್ಲೇ ಎಂದು ಜೆಡಿಎಸ್ ಸ್ಪಷ್ಟಪಡಿಸಿದೆ.
ವರದಿ : ಲಾವಣ್ಯ ಅನಿಗೋಳ



