Saturday, November 15, 2025

Latest Posts

ಕಾಂಗ್ರೆಸ್ ಜಾಲಕ್ಕೆ ಬೀಳಬೇಡಿ : BJPಯನ್ನ ಎಚ್ಚರಿಸಿದ್ದೇಕೆ RSS?

- Advertisement -

ರಾಜ್ಯ ರಾಜಕೀಯದಲ್ಲಿ ಆರ್‌ಎಸ್‌ಎಸ್ ಮತ್ತು ರಾಜ್ಯ ಸರ್ಕಾರದ ನಡುವಿನ ಜಟಾಪಟಿಯ ವಿಚಾರ ಇದೀಗ ತೀವ್ರಗೊಂಡಿರುವ ನಡುವೆ, ಸಂಘದ ಪ್ರಮುಖರು ಬಿಜೆಪಿ ನಾಯಕರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಪಥಸಂಚಲನ ವಿವಾದದ ಹಿನ್ನೆಲೆಯಲ್ಲಿ ಉದ್ವೇಗದ ಹೇಳಿಕೆ ನೀಡಬೇಡಿ, ಪಥಸಂಚಲನದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಬೇಡಿ ಎಂದು ಸೂಚನೆ ನೀಡಲಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಯುವಾಗ ಆತುರದ ಹೇಳಿಕೆಗಳಿಂದ ಕಾಂಗ್ರೆಸ್‌ನ ಜಾಲದಲ್ಲಿ ಸಿಕ್ಕಿಬೀಳುವ ಅಪಾಯವಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ರಾಜ್ಯದಲ್ಲಿ ಪಥಸಂಚಲನಕ್ಕೆ ಅನುಮತಿ ನೀಡದಿರುವುದು ಹಾಗೂ ಅದರ ಹಿನ್ನೆಲೆಯಲ್ಲಿನ ಕಾನೂನು ವಿವಾದದ ಕುರಿತು ಆರ್‌ಎಸ್‌ಎಸ್ ಮತ್ತು ಬಿಜೆಪಿ ನಾಯಕರ ನಡುವಿನ ಮಹತ್ವದ ಸಭೆ ನಡೆಯಿತು. ಮಧ್ಯಕ್ಷೇತ್ರೀಯ ಕಾರ್ಯವಾಹ ತಿಪ್ಪೇಸ್ವಾಮಿ ಸೇರಿದಂತೆ ಸಂಘದ ಪ್ರಮುಖರು ಹಾಗೂ ಬಿಜೆಪಿ ನಾಯಕರು ಭಾಗವಹಿಸಿದ್ದ ಈ ಚಿಂತನಾ ಸಭೆಯಲ್ಲಿ ಸಂಘದ ಸಿದ್ಧಾಂತ ಮತ್ತು ಹೋರಾಟಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಬಿಜೆಪಿ ನಾಯಕರ ಧ್ವನಿ ಒಂದೇ ಆಗಿರಬೇಕೆಂದು ಸೂಚಿಸಲಾಯಿತು. ಹತ್ತು ಜನರಿಂದ ಹತ್ತು ರೀತಿಯ ಹೇಳಿಕೆಗಳು ಹೊರಬಂದರೆ ಗೊಂದಲ ಹೆಚ್ಚುವ ಸಾಧ್ಯತೆ ಇರುವುದರಿಂದ ಎಲ್ಲರೂ ಸಂಯಮದಿಂದ ನಡೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ಸಂಘದ ಶತಮಾನೋತ್ಸವದ ಸಂದರ್ಭದಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿರುವ ಆರ್‌ಎಸ್‌ಎಸ್ ಎರಡು ಬಾರಿ ನಿಷೇಧಕ್ಕೆ ಒಳಗಾಗಿದ್ದರೂ ಜನಮನದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಇಂದಿನ ಪರಿಸ್ಥಿತಿಯಲ್ಲಿಯೂ ಸಂಘ ಯಾವುದೇ ಸಂದಿಗ್ಧತೆಯನ್ನು ಸಮರ್ಥವಾಗಿ ಎದುರಿಸಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ. ಆದರೆ ಸಂಘದ ವಿರುದ್ಧ ನಡೆಯುತ್ತಿರುವ ರಾಜಕೀಯ ಪ್ರಚಾರಕ್ಕೆ ಪ್ರತಿಕ್ರಿಯೆ ನೀಡುವ ಬದಲು ಶಾಂತವಾಗಿ ಹೋರಾಟ ಮುಂದುವರಿಸಬೇಕೆಂಬ ಅಭಿಪ್ರಾಯವನ್ನು ನಾಯಕರಿಗೆ ತಿಳಿಸಲಾಗಿದೆ.

ಸಭೆಯ ಅಂತ್ಯದಲ್ಲಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸುವುದು, ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಭ್ರಷ್ಟಾಚಾರವನ್ನು ಬಯಲಿಗೆಳೆದು ಕಾಂಗ್ರೆಸ್‌ನ ತಂತ್ರಕ್ಕೆ ಪ್ರತಿತಂತ್ರ ರೂಪಿಸುವುದು ಮುಖ್ಯ ಗುರಿಯಾಗಬೇಕು ಎಂದು ತೀರ್ಮಾನಿಸಲಾಯಿತು. ಸಂಘ ಹಾಗೂ ಬಿಜೆಪಿ ನಡುವಿನ ಈ ಸಹಭಾಗಿತ್ವದ ಮೂಲಕ ಭವಿಷ್ಯದಲ್ಲಿ ಸಂಘದ ಸಿದ್ಧಾಂತ, ಸಂಘಟನೆಯ ಏಕತೆ ಮತ್ತು ರಾಜಕೀಯ ಹೋರಾಟಕ್ಕೆ ಹೊಸ ದಿಕ್ಕು ನೀಡುವ ನಿರೀಕ್ಷೆ ವ್ಯಕ್ತವಾಗಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss