ಧರ್ಮಸ್ಥಳ ನಿಗೂಢ ಸಾವುಗಳ ಪ್ರಕರಣ ತನಿಖೆ ಶುರುವಾದ ಬಳಿಕ, ಹಳೇ ಅಸಹಜ ಸಾವುಗಳ ಪ್ರಕರಣಕ್ಕೆ ಮರುಜೀವ ಬಂದಿತ್ತು. ಕೆಲವರು ಧೈರ್ಯ ಮಾಡಿ SIT ಎದುರು ಪ್ರತ್ಯಕ್ಷರಾಗಿದ್ರು. ಇವರಲ್ಲಿ ಅನನ್ಯಾ ಭಟ್ ತಾಯಿ ಸುಜಾತಾ ಭಟ್ ಕೂಡ ಒಬ್ರು.
ನನ್ನ ಮಗಳು ಅನನ್ಯಾ ಭಟ್, ಮಣಿಪಾಲ ವೈದ್ಯಕೀಯ ಕಾಲೇಜಿನಲ್ಲಿ ಓದ್ದುತ್ತಿದ್ಲು. 2003ರಲ್ಲಿ ಧರ್ಮಸ್ಥಳಕ್ಕೆ ಪ್ರವಾಸಕ್ಕೆಂದು ಹೋಗಿದ್ದಾಗ ನಾಪತ್ತೆಯಾಗಿದ್ಲು. ದೇವಸ್ಥಾನದ ಸಿಬ್ಬಂದಿ, ನನ್ನ ಮಗಳನ್ನು ಕರೆದುಕೊಂಡು ಹೋಗಿದ್ದಾರೆ. ಇದನ್ನ ಕೆಲವರು ನೋಡಿದ್ದಾರೆ. ಬೆಳ್ತಂಗಡಿ ಠಾಣೆಗೆ ಹೋದಾಗ, ದೂರು ದಾಖಲಿಸಿಕೊಳ್ಳದೆ ಬೈದು ಕಳಿಸಿದ್ರು. ನಾನು ಹಲವರಿಂದ ನಿಂದನೆ ಆಗಿದೆ ಅಂತಾ ಹೇಳಿದ್ರು.
ಅದೇ ದಿನ ರಾತ್ರಿ ದೇವಸ್ಥಾನದ ಸಿಬ್ಬಂದಿ ತನ್ನನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ತಲೆಗೆ ಹೊಡೆದಿದ್ರು. 3 ತಿಂಗಳು ಕೋಮಾದಲ್ಲಿದ್ದೆ.
ಹೀಗಂತ ಎಸ್‌ಐಟಿಗೆ ನೀಡಿದ್ದ ದೂರಿನ ಪತ್ರದಲ್ಲಿ, ಸುಜಾತಾ ಭಟ್ ಉಲ್ಲೇಖಿಸಿದ್ರು. ಜೊತೆಗೆ ಶೋಧ ಕಾರ್ಯಾಚರಣೆ ವೇಳೆ ತಮ್ಮ ಮಗಳ ಅಸ್ಥಿಪಂಜರ ಸಿಕ್ಕರೆ, ತಮಗೆ ಕೊಡುವಂತೆ ಮನವಿ ಮಾಡಿದ್ರು.
ಆದ್ರೀಗ, ಸುಜಾತ ಭಟ್ ಪೊಲೀಸರ ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರ ಪರ ವಕೀಲರೂ ಕೂಡ ತನಿಖೆಗೆ ಸಹಕರಿಸುತ್ತಿಲ್ಲವಂತೆ. ಅನನ್ಯಾ ಭಟ್ ಫೋಟೋ ಅಥವಾ ಯಾವುದೇ ದಾಖಲೆ ಕೇಳಿದ್ರೂ, ಕೊಡುತ್ತಿಲ್ಲ. ಮನೆಗೆ ಬೆಂಕಿ ಬಿದ್ದು ಎಲ್ಲವೂ ಸುಟ್ಟು ಹೋಗಿವೆ ಅಂತಾ ಹೇಳ್ತಿದ್ದಾರೆ. ಅನನ್ಯಾ ಭಟ್ SSLC ಅಂಕಪಟ್ಟಿ, ಕಾಲೇಜಿನಲ್ಲಿ ಓದಿದ ದಾಖಲೆಗಳೂ ಇಲ್ವಂತೆ.
ಮತ್ತೊಂದು ಸವಾಲಿನ ಅಂಶ ಅಂದ್ರೆ, ಮಣಿಪಾಲ ಮೆಡಿಕಲ್ ಕಾಲೇಜಿನಲ್ಲೂ ಅನನ್ಯಾ ಭಟ್ ಹೆಸರಿಲ್ಲ. ಕಸ್ತೂರ ಬಾ ಕಾಲೇಜಿಗೂ ಪೊಲೀಸರು ಭೇಟಿ ನೀಡಿದ್ದಾರೆ. 1998ರಿಂದ 2005ರವರೆಗಿನ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಆದ್ರೆ ಅನನ್ಯಾ ಭಟ್ ಹೆಸರಿನ, ಯಾವುದೇ ವಿದ್ಯಾರ್ಥಿ ಇಲ್ಲಿ ವ್ಯಾಸಂಗ ಮಾಡಿಲ್ಲ ಅನ್ನೋದು ದೃಢಪಟ್ಟಿದೆ. ಹೀಗಾಗಿ ಸುಜಾತ ಭಟ್ ದೂರಿನ ವಿಶ್ವಾಸಾರ್ಹತೆ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.