ಕನ್ನಡ ಚಿತ್ರರಂಗದ ಸಾಹಸ ಸಿಂಹ, ಅಭಿನಯ ಭಾರ್ಗವ, ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ ಡಾ.ವಿಷ್ಣುವರ್ಧನ್ ಅವರ 11ನೇ ಪುಣ್ಯ ಸ್ಮರಣೆ ಇಂದು. ವಿಷ್ಣು ಎಲ್ಲರನ್ನು ಅಗಲಿ ಇಂದಿಗೆ 11 ವರ್ಷ ಕಳೆದಿದೆ. ಆದ್ರೂ ಎಂದಿಗೂ ಸಾಹಸ ಸಿಂಹ ಅಭಿಮಾನಿಗಳ ಮನಸ್ಸಿನಲ್ಲಿ ಅಮರ.

ಅದು 2009 ಡಿಸೆಂಬರ್ 30 ಕನ್ನಡ ಚಿತ್ರರಂಗದ ಪಾಲಿನ ಕರಾಳ ದಿನ. ಸೂಪರ್ ಹಿಟ್ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದ ವಿಷ್ಣು ದಾದಾ ಮರೆಯಾದ ದಿನವಿದು. 11ವರ್ಷಗಳ ಹಿಂದೆ ಇದೇ ದಿನ ಇಡೀ ಚಿತ್ರರಂಗ ಶೋಕಸಾಗರದಲ್ಲಿ ಮುಳುಗಿತ್ತು. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅನಾಥಮಾಡಿ, ವಿಷ್ಣುದಾದಾ ಬಾರದ ಲೋಕಕ್ಕೆ ಹೊರಟು ಹೋಗಿದ್ದರು. ಸಾಹಸಿಂಹ ಮರೆಯಾಗಿ11 ವರ್ಷಗಳು ಕಳೆದಿವೆ. ಇಂದು ಅವರ ಪುಣ್ಯ ಸ್ಮರಣೆ. ಹೀಗಾಗಿ ಅಭಿಮಾನಿಗಳು ವಿಷ್ಣುವರ್ಧನ್ ಸಮಾಧಿ ಇರುವ ಅಭಿಮಾನ್ ಸ್ಟುಡಿಯೋಗೆ ಬಂದು ನೆಚ್ಚಿನ ನಟನ ಸಮಾಧಿಗೆ ಪುಷ್ಮ ನಮನ ಸಲ್ಲಿಸುತ್ತಾರೆ. ಸಮಾಧಿಗೆ ಹೂವಿನಿಂದ ಅಲಂಕಾರ ಮಾಡಿ, ವಿಶೇಷ ಪೂಜೆ ಸಲ್ಲಿಸಿ ವಿಷ್ಣುದಾದಾನನ್ನು ಸ್ಮರಿಸುತ್ತಾರೆ.

ಪುಣ್ಯಸ್ಮರಣೆಯ ಅಂಗವಾಗಿ ಅಭಿಮಾನಿಗಳಿಂದ ಅನ್ನದಾನ ಸೇರಿದಂತೆ ವಿಶೇಷ ಕಾರ್ಯಕ್ರಮಗಳನ್ನು ಪ್ರತಿವರ್ಷ ಹಮ್ಮಿಕೊಳ್ತಾರೆ. ಇನ್ನೂ ಭಾರತಿ ವಿಷ್ಣುವರ್ಧನ್ ಹಾಗೂ ಕುಟುಂಬದವರು ಮೈಸೂರಿನಲ್ಲಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿದರು.