ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕುಖ್ಯಾತ ದರೋಡೆಕೋರ ಗ್ಯಾಂಗ್ ನುಗ್ಗಿರುವ ಅನುಮಾನ ಮತ್ತಷ್ಟು ಗಟ್ಟಿಯಾಗಿದೆ. ಕೇಶ್ವಾಪುರದ ಪರ್ಲ್ ಲೇಔಟ್ ಪ್ರದೇಶದಲ್ಲಿ ಒಂದೇ ರಾತ್ರಿ ಎರಡು ಮನೆಗಳ ಮೇಲೆ ದಾಳಿ ನಡೆಸಲು ಯತ್ನಿಸಿರುವ ಘಟನೆ ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿದೆ.
ಮುಖಕ್ಕೆ ಮಾಸ್ಕ್, ಕೈಯಲ್ಲಿ ಬಡಿಗೆ, ಕೋಲು ಮತ್ತು ಕಬ್ಬಿಣದ ರಾಡ್‌ಗಳಂತಹ ಆಯುಧಗಳನ್ನು ಹಿಡಿದು ಬಂದ ಡಕಾಯಿತರು ಮನೆಗಳ ಕಬ್ಬಿಣದ ಗೇಟ್‌ಗಳನ್ನು ರಾಜರೋಷವಾಗಿ ಮುರಿಯಲು ಮುಂದಾಗಿದ್ದಾರೆ. ಗೇಟ್ ಮುರಿಯುವ ಭಾರೀ ಶಬ್ದ ಕೇಳಿದ ಸ್ಥಳೀಯರು ಎಚ್ಚರಗೊಂಡು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬೀಟ್ ಪೊಲೀಸರು ಸ್ಥಳಕ್ಕೆ ಧಾವಿಸುತ್ತಿದ್ದಂತೆ 6 ಮಂದಿ ದರೋಡೆಕೋರರು ಮನೆಯಿಂದ ಹೊರಬಂದು ಕಾಂಪೌಂಡ್‌ನಲ್ಲಿ ಅಡಗಿ ಕುಳಿತಿರುವುದು ಗಮನಕ್ಕೆ ಬಂದಿದೆ. ಈ ವೇಳೆ ಪೊಲೀಸರು ವಿಸಿಲ್ ಊದಿದ ಕ್ಷಣದಲ್ಲೇ ಗ್ಯಾಂಗ್ ಸದಸ್ಯರು ಚಕಿತವಾಗಿ ಕಣ್ಣು ಮುಂದೆ ನಾಪತ್ತೆಯಾಗಿದ್ದಾರೆ. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಸ್ಥಳದಿಂದ ಪರಾರಿಯಾಗಿರುವುದು ಆತಂಕ ಹೆಚ್ಚಿಸಿದೆ.
ಪೊಲೀಸರು ಈ ಗ್ಯಾಂಗ್ ಕುಖ್ಯಾತ ಬಾಂಗ್ಲಾ ಗ್ಯಾಂಗ್ ಆಗಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಇವರು ಮನೆ ದರೋಡೆ ಮಾತ್ರವಲ್ಲದೆ, ಯಾರಾದರೂ ಪ್ರತಿರೋಧ ತೋರಿಸಿದರೆ ಜೀವಕ್ಕೆ ಅಪಾಯ ಉಂಟಾಗುವ ಮಟ್ಟದ ಅಪರಾಧಿಗಳಾಗಿರುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.
ಘಟನೆಯ ನಂತರ ಪೊಲೀಸರು ಸ್ಥಳೀಯರಿಗೆ ರಾತ್ರಿ ವೇಳೆಯಲ್ಲಿ ಹೆಚ್ಚುವರಿ ಎಚ್ಚರಿಕೆಯಿಂದ ಇರಲು, ಅನುಮಾನಾಸ್ಪದ ಚಲನವಲನ ಕಂಡುಬಂದರೆ ತಕ್ಷಣ ಮಾಹಿತಿ ನೀಡಲು ಮನವಿ ಮಾಡಿದ್ದಾರೆ. ಪೊಲೀಸರ ಪ್ರಕಾರ, ಹೊಸ ಗ್ಯಾಂಗ್ ಪ್ರವೇಶದಿಂದ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಹಾಗೂ ಮುಂದಿನ ದಿನಗಳಲ್ಲಿ ಹೆಚ್ಚುವರಿ ಬೀಗಿ ಭದ್ರತೆ ಕೈಗೊತ್ತಲಾಗುತ್ತಿದೆ.
ವರದಿ : ಲಾವಣ್ಯ ಅನಿಗೋಳ

