ರಾಷ್ಟ್ರಪತಿ ದ್ರೌಪದಿ ಮುರ್ಮು ಶಬರಿಮಲೆಗೆ ತೆರಳಿದ್ದು, ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. ವಿಶೇಷ ಅಂದ್ರೆ, ಕಪ್ಪು ಸೀರೆಯುಟ್ಟು ಭಕ್ತಿ ಭಾವ ಪ್ರದರ್ಶಿಸಿರುವ ಮುರ್ಮು, ಅಯ್ಯಪ್ಪನ ಆಶೀರ್ವಾದ ಪಡೆದಿದ್ದಾರೆ. ಶಬರಿಮಲೆ ಹೋಗಬೇಕಂದ್ರೆ ಕೆಲವು ಶಾಸ್ತ್ರ ಸಂಪ್ರದಾಯ, ಕಠಿಣ ವ್ರತ ಪಾಲಿಸಬೇಕಾಗುತ್ತೆ. ಹೀಗಿರುವಾಗ 67 ವರ್ಷದ ದ್ರೌಪದಿ ಮುರ್ಮು, ಶಾಸ್ತ್ರಬದ್ಧವಾಗಿ ತೆರಳಿ, ಅಯ್ಯಪ್ಪನ ದರ್ಶನ ಪಡೆದಿದ್ದಾರೆ.
ಪಂಪಾ ಬಳಿ ನೀಲಕ್ಕಲ್‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಲಿಕಾಪ್ಟರ್ ಇಳಿಯಲು ಯೋಜಿಸಲಾಗಿತ್ತು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಪ್ರಮದಂಗೆ ಬದಲಾಯಿಸಲಾಗಿತ್ತು. ಹೀಗಾಗಿ ಹೊಸದಾಗಿ ಕಾಂಕ್ರೀಟ್ ಲ್ಯಾಂಡಿಂಗ್ ಪ್ಯಾಡ್ ಮಾಡಲಾಗಿತ್ತು. ಕಾಂಕ್ರೀಟ್ ಸಂಪೂರ್ಣವಾಗಿ ಗಟ್ಟಿಯಾಗಿರದ ಕಾರಣ, ಹೆಲಿಕಾಪ್ಟರ್ ಇಳಿಯುತ್ತಿದ್ದಂತೆ ಒಂದು ಭಾಗ ಸಿಲುಕಿಕೊಂಡಿತ್ತು.
ತಕ್ಷಣವೇ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಜೊತೆಗೂಡಿ, ಭಾರತೀಯ ವಾಯುಪಡೆಯ ಎಂಐ -17 ಹೆಲಿಕಾಪ್ಟರ್‌ನ ಚಕ್ರಗಳನ್ನು ಮುಂದಕ್ಕೆ ತಳ್ಳಿದ್ದಾರೆ. ಸದ್ಯ, ರಾಷ್ಟ್ರಪತಿಗಳು ಸೇರಿದಂತೆ ಯಾರಿಗೂ ಯಾವುದೇ ಹಾನಿಯಾಗಿಲ್ಲ. ಅಕ್ಟೋಬರ್ 21ರಿಂದ 24ರವರೆಗೆ 4 ದಿನಗಳ ಕಾಲ, ದ್ರೌಪದಿ ಮುರ್ಮು ಕೇರಳ ಪ್ರವಾಸ ಕೈಗೊಂಡಿದ್ದಾರೆ.
ಶಬರಿಮಲೆಗೆ ಭೇಟಿ ನೀಡಿದ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ದ್ರೌಪದಿ ಮುರ್ಮು ಪಾತ್ರರಾಗಿದ್ದಾರೆ. 1970ರ ದಶಕದಲ್ಲಿ ಶಬರಿಮಲೆಗೆ ಮಾಜಿ ರಾಷ್ಟ್ರಪತಿ ವಿ.ವಿ. ಗಿರಿ ಭೇಟಿ ಕೊಟ್ಟಿದ್ರು. ಮತ್ತೊಂದು ಪ್ರಮುಖ ಅಂಶ ಅಂದ್ರೆ, ಮೊದಲೆಲ್ಲಾ ಶಬರಿಮಲೆಗೆ 10 ವರ್ಷ ಮೇಲ್ಪಟ್ಟ, 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಆದ್ರೆ, ಕೆಲ ವರ್ಷಗಳ ಹಿಂದೆ ಈ ನಿಯಮನ್ನು ತೆಗೆದುಹಾಕಲಾಗಿದೆ. ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಹೆಣ್ಮಕ್ಕಳು ಭೇಟಿ ನೀಡಬಹುದೆಂದು, 2018ರಲ್ಲಿ ಸುಪ್ರೀಂಕೋರ್ಟ್ ಆದೇಶ ನೀಡಿತ್ತು.
ದ್ರೌಪದಿ ಮುರ್ಮು ಅವರು ಇಂದು ಸಂಜೆ ತಿರುವನಂತಪುರಕ್ಕೆ ಹಿಂತಿರುಗಲಿದ್ದಾರೆ. ನಾಳೆ ರಾಜಭವನದಲ್ಲಿ ಮಾಜಿ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ನಂತರ, ವರ್ಕಳದ ಶಿವಗಿರಿ ಮಠದಲ್ಲಿ ಶ್ರೀ ನಾರಾಯಣ ಗುರುಗಳ ಮಹಾಸಮಾಧಿ ಶತಮಾನೋತ್ಸವವನ್ನು ಉದ್ಘಾಟಿಸಲಿದ್ದಾರೆ. ಮತ್ತು ಕೊಟ್ಟಾಯಂ ಜಿಲ್ಲೆಯ ಪಾಲಾದಲ್ಲಿರುವ ಸೇಂಟ್ ಥಾಮಸ್ ಕಾಲೇಜಿನ ಪ್ಲಾಟಿನಂ ಜುಬಿಲಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಅಕ್ಟೋಬರ್ 24ರಂದು ಎರ್ನಾಕುಲಂನ ಸೇಂಟ್ ತೆರೇಸಾ ಕಾಲೇಜಿನ ಶತಮಾನೋತ್ಸವದಲ್ಲಿ ಭಾಗವಹಿಸುವ ಮೂಲಕ, ರಾಷ್ಟ್ರಪತಿ ಮುರ್ಮು ಅವರು ತಮ್ಮ ಕೇರಳ ಭೇಟಿಯನ್ನು ಮುಕ್ತಾಯಗೊಳಿಸಲಿದ್ದಾರೆ.