ನವದೆಹಲಿ: ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಭಾರತದ ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮು ಅವರು, ಇಂದು 15ನೇ ರಾಷ್ಟ್ರಪತಿಯಾಗಿ ಪ್ರಮಾಣವಚನವನ್ನು ಸ್ವೀಕರಿಸಲಿದ್ದಾರೆ.
ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಬೆಳಿಗ್ಗೆ 10.15ಕ್ಕೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಪ್ರತಿಜ್ಞಾ ವಿಧಿಯನ್ನು ಬೋಧಿಸಲಿದ್ದಾರೆ.
ಈ ಸಮಾರಂಭಕ್ಕೂ ಮುನ್ನಾ, ನಿರ್ಗಮಿತ ರಾಷ್ಟ್ರಪತಿ ಮತ್ತು ನೂತನ ರಾಷ್ಟ್ರಪತಿಗಳು ವಿದ್ಯುಕ್ತ ಮೆರವಣಿಗೆಯಲ್ಲಿ ಸಂಸತ್ತಿಗೆ ಆಗಮಿಸಲಿದ್ದಾರೆ. ಸೇನಾ ಸಿಬ್ಬಂದಿ 21 ಬಾರಿ ಕುಶಾಲ ತೋಪು ಹಾರಿಸಿದ ನಂತ್ರ, ನೂತನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದು, ನಂತ್ರ ದೇಶವನ್ನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.




