ಕುಡಿದ ಅಮಲಿನಲ್ಲಿ ವಿದ್ಯಾರ್ಥಿನಿಯ ಕೂದಲು ಕತ್ತರಿಸಿದ ಶಿಕ್ಷಕ

Madhya Pradesh: ಶಾಲೆಗೆ ಬರುವ ಮಕ್ಕಳಿಗೆ ಸರಿಯಾಗಿ ಪಾಠ ಹೇಳಿಕೊಟ್ಟು ಅವರ ಭವಿಷ್ಯ ರೂಪಿಸಬೇಕಾದ ಶಿಕ್ಷಕರೇ ಎಡವಟ್ಟು ಮಾಡಿದರೆ, ಆ ಮಕ್ಕಳ ಭವಿಷ್ಯ ಅತ್ಯುತ್ತಮವಾಗಿ ರೂಪುಗೊಳ್ಳುವುದಾದರೂ ಹೇಗೆ..? ಮಧ್ಯಪ್ರದೇಶದ ಶಾಲೆಯೊಂದರಲ್ಲಿ ಶಿಕ್ಷಕನೋರ್ವ ಕುಡಿದ ಅಮಲಿನಲ್ಲಿ ಶಾಲೆಗೆ ಬಂದು, ವಿದ್ಯಾರ್ಥಿನಿಯ ಜಡೆಯನ್ನೇ ಕತ್ತರಿಸಿದ್ದಾನೆ.

ರತ್ಲಾಮ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, ವೀರ್‌ ಸಿಂಗ್ ಮೇಧಾ ಎಂಬ ಶಿಕ್ಷಕ, ಕುಡಿದು ತರಗತಿಗೆ ಬಂದಿದ್ದು, ವಿದ್ಯಾರ್ಥಿನಿಯ ಕೂದಲು ಕತ್ತರಿಸಿದ್ದಾನೆ. ಈ ಘಟನೆಯನ್ನು ಯಾರೋ, ತಮ್ಮ ಮೊಬೈಲ್‌ನಲ್ಲಿ ವೀಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಶಿಕ್ಷಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಯಾವ ಕಾರಣಕ್ಕಾಗಿ ಆತ ಆಕೆಯ ಕೂದಲನ್ನು ಕತ್ತರಿಸಿದ್ದಾನೆಂದು ಗೊತ್ತಿಲ್ಲ. ಆದರೆ ಆಕೆಯ ಕೂದಲು ಕತ್ತರಿಸುವುದನ್ನು ಕಂಡು ಗ್ರಾಮಸ್ಥರು ಹಾಗೆ ಮಾಡಬೇಡಿ ಎಂದರೂ ಕೂಡ, ನೀವು ವೀಡಿಯೋ ಮಾಡಿಕೊಳ್ಳಿ. ನನ್ನನ್ನು ಯಾರೂ ಏನು ಮಾಡಲು ಸಾಧ್ಯವಿಲ್ಲ ಎಂದು ಶಿಕ್ಷಕ ಸೊಕ್ಕಿನ ಮಾತನ್ನಾಡಿದ್ದಾನೆ.

ಆದರೆ ಈ ಸುದ್ದಿ ಕಲೆಕ್ಟರ್ ವರೆಗೂ ತಲುಪಿದ್ದು, ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ. ಅಲ್ಲದೇ ಈತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.

About The Author