ಮೆಟ್ರೋ ರೈಲು ಕೆಟ್ಟು ನಿಂತ ಕಾರಣ ನೇರಳೆ ಮಾರ್ಗದಲ್ಲಿ, ಪ್ರಯಾಣಿಕರು ಪರದಾಡುವಂತಾಗಿತ್ತು. ಚಲ್ಲಘಟ್ಟದಿಂದ ವೈಟ್ ಫೀಲ್ಡ್ ನಡುವೆ ಸಂಚಾರ ವ್ಯತ್ಯಯ ಉಂಟಾಗಿತ್ತು. ಚಲ್ಲಘಟ್ಟ ಹಾಗೂ ವೈಟ್‌ಫೀಲ್ಡ್‌ನಿಂದ ಹೊರಟ ಮೆಟ್ರೋ ರೈಲುಗಳು, ನಿಂತಲ್ಲೇ ಸುಮಾರು 15 ನಿಮಿಷಗಳಿಗೂ ಹೆಚ್ಚು ಕಾಲ ನಿಲ್ಲುವಂತಾಗಿತ್ತು.
ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ ಕಾರಣ, ರೈಲು ಸಂಚಾರ ವಿಳಂಬವಾಗಿದೆ. ಬೆಳಗ್ಗೆ 8.50ರಿಂದ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಈ ಬಗ್ಗೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಸ್ಪಷ್ಟನೆ ಕೊಟ್ಟಿದ್ದಾರೆ. ವಿಜಯನಗರ -ಹೊಸಹಳ್ಳಿ ನಿಲ್ದಾಣಗಳ ನಡುವೆ ತಾಂತ್ರಿಕ ಸಮಸ್ಯೆಯಿಂದಾಗಿ, ರೈಲೊಂದು ಕೆಟ್ಟು ನಿಂತಿದ್ದೇ ಇದಕ್ಕೆ ಕಾರಣ ಎಂದಿದ್ದಾರೆ.
ಕೆಟ್ಟು ನಿಂತ ರೈಲನ್ನು ಚಲ್ಲಘಟ್ಟ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ. ಬಳಿಕ ಮೆಟ್ರೋ ರೈಲು ಸಂಚಾರ ಸಹಜ ಸ್ಥಿತಿಗೆ ಮರಳಿದೆ. ಪೀಕ್ ಅವರ್‌ನಲ್ಲೇ ಮೆಟ್ರೋ ಸಂಚಾರ ವ್ಯತ್ಯಯವಾಗಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಕೆಲವು ಪ್ರಯಾಣಿಕರು ಮೆಟ್ರೋದಿಂದ ಅರ್ಧದಲ್ಲೇ ಇಳಿದು ಹೊರ ಹೋದರೂ ಕ್ಯಾಬ್ ಸಿಗದೆ ಪರದಾಡುವಂತಾಗಿತ್ತು. ಬೆಳಗ್ಗೆ ಕಚೇರಿ ಹಾಗೂ ಇತರೆ ಕೆಲಸಗಳಿಗೆ ತೆರಳುವ ಅವಸರದಲ್ಲಿದ್ದ ಜನರಿಗೆ, ಮೆಟ್ರೋ ಸೇವೆ ಕೈಕೊಟ್ಟಿದೆ. ಕೆಲವರು ಪ್ರಮುಖ ಕಚೇರಿ ಸಭೆಗಳನ್ನು ತಪ್ಪಿಸಿಕೊಳ್ಳಬಾರದು ಎಂಬ ಕಾರಣಕ್ಕೆ, ಮೆಟ್ರೋ ರೈಲಿನ ಒಳಗಿನಿಂದಲೇ ಮೀಟಿಂಗ್‌ಗಳಿಗೆ ಹಾಜರಾದರು.
ಸದ್ಯ ಮೆಟ್ರೋ ಸಂಚಾರ ಆರಂಭವಾಗಿದ್ದರೂ, ಒಂದು ತಾಸಿನಿಂದ ಕಾಯುತ್ತಿದ್ದವರು ಏಕಾಏಕಿ ನಿಲ್ದಾಣಗಳಿಗೆ ಮುಗಿಬಿದ್ದಿದ್ರಿಂದ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿತ್ತು. ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕೆ ಮೆಟ್ರೋ ಸಿಬ್ಬಂದಿ ಹರಸಾಹಸ ಪಡುವಂತಾಗಿತ್ತು.
ಜನದಟ್ಟಣೆಯಿಂದ ಕೂಡಿದ ಕೋಚ್‌ಗಳಲ್ಲಿ ಸಿಲುಕಿಕೊಂಡ ಪ್ರಯಾಣಿಕರು ಆತಂಕ ಮತ್ತು ಅಸ್ವಸ್ಥತೆಯಿಂದ ಬಳಲುವಂತಾಗಿತ್ತು. ರೈಲುಗಳು ನಿಂತಲ್ಲೇ ನಿಂತ ಪರಿಣಾಮ, ಗಾಳಿಯಾಡದೆ ಉಸಿರುಗಟ್ಟುವಿಕೆಯಿಂದ ಇಬ್ಬರು ಯುವಕರು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ. ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದ ಪೋಷಕರು, ಹಿರಿಯ ನಾಗರಿಕರು ಮತ್ತು ಆರೋಗ್ಯ ಸಮಸ್ಯೆಗಳಿರುವವರು ಪರಿಸ್ಥಿತಿಯನ್ನು ನಿಭಾಯಿಸಲು ಹರಸಾಹಸಪಟ್ಟರು.

