Political News: ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರಿನ ಸದಾಶಿವನಗರದ ಡಾಲರ್ಸ್ ಕಾಲೊನಿಯ ಮನೆಯಲ್ಲಿದ್ದ ನಾಗೇಂದ್ರ ಅವರನ್ನು ಇಡಿ ವಶಕ್ಕೆ ಪಡೆದಿದ್ದಾರೆ.
ಬಳಿಕ ನಾಗೇಂದ್ರ ಅವರನ್ನು ಇಡಿ ಕಚೇರಿಗೆ ಕರೆತರಲಾಗಿದೆ. ಈ ವೇಳೆ ಹಗರಣದ ಬಗ್ಗೆ ನನಗೇನೂ ಗೊತ್ತಿಲ್ಲ. ನನ್ನನ್ನು ಸುಮ್ಮನೆ ಇಲ್ಲಿ ಕರೆತಂದಿದ್ದಾರೆಂದು ನಾಗೇಂದ್ರ ಹೇಳಿದ್ದಾರೆ. ನಾಗೇಂದ್ರ ಮತ್ತು ದದ್ದಲ್ ಅವರ ಆಪ್ತ ಸಹಾಯಕರು, ಮಾಜಿ ಆಪ್ತ ಸಹಾಯಕರನ್ನೂ ಇದೇ ಕಚೇರಿಯಲ್ಲಿ ಇರಿಸಲಾಗಿದೆ. ಹಗರಣದಲ್ಲಿ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಖಾತೆಗೆ ಬಿ.ನಾಗೇಂದ್ರ ಇತ್ತೀಚಿಗೆ ರಾಜೀನಾಮೆ ನೀಡಿದ್ದರು.
ಹಗರಣ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಕಳೆದ ಎರಡ್ಮೂರು ದಿನಗಳಿಂದ ವಿವಿಧೆಡೆ ದಾಳಿ ನಡೆಸಿದ್ದರು. ಮಾಜಿ ಸಚಿವ ಬಿ. ನಾಗೇಂದ್ರ ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸವನಗೌಡ ದದ್ದಲ್ ನಿವಾಸಗಳಲ್ಲಿ ಶೋಧ ಕಾರ್ಯ ನಡೆದಿತ್ತು. ಒಟ್ಟು ಹದಿನೆಂಟು ಕಡೆ ದಾಳಿ ಮಾಡಿ ಅಕ್ರಮ ವ್ಯವಹಾರದ ದಾಖಲೆ ಪತ್ರಗಳ ಪರಿಶೀಲನೆ ನಡೆಸಿತ್ತು. ಬಸವನಗೌಡ ದಡ್ಡಲ್ ಅವರ ಮಾಜಿ ಪಿಎ ಪಂಪಣ್ಣ ಮನೆ ಮೇಲೂ ಇಡಿ ದಾಳಿ ನಡೆದಿದ್ದು, ಅಕ್ರಮಗಳ ಮಾಹಿತಿ ಲಭ್ಯವಾಗಿತ್ತು.