ವೈದ್ಯಕೀಯ ಕೋರ್ಸ್ಗಳ ಪ್ರವೇಶಾತಿಗಾಗಿ ಇತ್ತೀಚೆಗಷ್ಟೇ ನಡೆದ ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಪರೀಕ್ಷೆಯನ್ನ ರದ್ದುಗೊಳಿದಸಬೇಕು ಎಂಬ ಆಗ್ರಹ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಇದೀಗ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಜೂ.18ರಂದು ನಡೆಸಿದ್ದ ಉಪನ್ಯಾಸಕರ ಅರ್ಹತಾ ಪರೀಕ್ಷೆಯನ್ನೂ ಕೇಂದ್ರ ಸರ್ಕಾರ ರದ್ದುಗೊಳಿಸಿದೆ.
ಈ ಪರೀಕ್ಷೆಯಲ್ಲಿಯೂ ಅಕ್ರಮ ನಡೆದ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯ ಈ ಕ್ರಮ ಕೈಗೊಂಡಿದೆ. ಜೊತೆಗೆ ಈ ಪ್ರಕರಣದ ತನಿಖೆಯ ಹೊಣೆಯನ್ನು ಸಿಬಿಐಗೆ ಹಸ್ತಾಂತರಿಸಲು ತೀರ್ಮಾನಿಸಲಾಗಿದೆ.
ಜೂ.18ರ ಮಂಗಳವಾರದಂದು ದೇಶದಾದ್ಯಂತ 11ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಯುಜಿಸಿ-ನೆಟ್ ಪರೀಕ್ಷೆಯನ್ನು ಬರೆದಿದ್ದರು. ಒಟ್ಟು 317 ನಗರಗಳಲ್ಲಿ 1205 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಗಿತ್ತು. ಆದರೆ ಇದೀಗ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ನ್ಯಾಷನಲ್ ಸೈಬರ್ ಕ್ರೈಮ್ ಥ್ರೆಟ್ ಅನಾಲಿಟಿಕ್ಸ್ ಘಟಕವು ಈ ಬಗ್ಗೆ ಮಾಹಿತಿ ನೀಡಿದೆ. ಹೀಗಾಗಿ, ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನೆಟ್ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಹೊಸದಾಗಿ ಪರೀಕ್ಷೆ ನಡೆಸುವ ಬಗ್ಗೆ ಶೀಘ್ರವೇ ಮಾಹಿತಿ ನೀಡಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವಾಲಯ ತಿಳಿಸಿದೆ.