ಮುಂಬೈ: ಶಿವಸೇನೆಯ ಬಂಡಾಯ ಗುಂಪಿನ ನಾಯಕ ಏಕನಾಥ್ ಶಿಂಧೆ ಅವರು ಗುರುವಾರ ಮುಂಬೈನ ರಾಜಭವನದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರ ಉಪಸ್ಥಿತಿಯಲ್ಲಿ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಠಾಕ್ರೆ ನೇತೃತ್ವದ ಶಿವಸೇನೆಗೆ ವಿಶ್ವಾಸಮತ ಯಾಚನೆ ನಡೆಸುವಂತೆ ಸುಪ್ರೀಂ ಕೋರ್ಟ್ ನೀಡಿದ ಆದೇಶದ ನಂತರ ಉದ್ಧವ್ ಠಾಕ್ರೆ ಅವರು ಉನ್ನತ ಹುದ್ದೆಗೆ ರಾಜೀನಾಮೆ ನೀಡಿದ ಒಂದು ದಿನದ ನಂತರ ಶಿಂಧೆ ಮಹಾರಾಷ್ಟ್ರದ 20 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಆದಾಗ್ಯೂ, ಒಂದು ವಾರದ ರಾಜಕೀಯ ಪ್ರಕ್ಷುಬ್ಧತೆ ಮತ್ತು ಪಕ್ಷದೊಂದಿಗೆ ಬಿರುಕು ಮೂಡಿಸಿದ ನಂತರ, ಶಿಂಧೆ ನೇತೃತ್ವದ ಬಂಡಾಯ ಪಾಳಯದಲ್ಲಿ ಹೆಚ್ಚಿನ ಎಂಎಲ್ಗಳು ಬಂಡಾಯವೆದ್ದ ನಂತರ, ಠಾಕ್ರೆ ರಾಜೀನಾಮೆ ನೀಡೋದಾಗಿ ಸಾರ್ವಜನಿಕ ಘೋಷಣೆಯನ್ನು ಮಾಡಿದರು. ಸಿಎಂ ಮತ್ತು ಎಂಎಲ್ಸಿ ಸ್ಥಾನದಿಂದ ಕೆಳಗಿಳಿದರು. ಅದೇ ರಾತ್ರಿ ಠಾಕ್ರೆ ತಮ್ಮ ರಾಜೀನಾಮೆಯನ್ನು ಮಹಾರಾಷ್ಟ್ರ ರಾಜ್ಯಪಾಲರಿಗೆ ಸಲ್ಲಿಸಿದರು.
ಥಾಣೆ ನಗರದ ಕೊಪ್ರಿ-ಪಂಚಪಖಾಡಿಯ ಶಾಸಕರಾಗಿರುವ ಶಿಂಧೆ ಅವರು ಏಕಾಂಗಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ನಂತರ ಸಂಪುಟ ವಿಸ್ತರಣೆ ನಡೆಯಲಿದೆ. ಶಿಂಧೆ ಅವರ ಗುಂಪಿಗೆ ಬಿಜೆಪಿ ಬೆಂಬಲ ನೀಡಲಿದೆ ಎಂದು ಫಡ್ನವೀಸ್ ಹೇಳಿದರು.
ವಿಧಾನಸಭೆಯಲ್ಲಿ ಬಿಜೆಪಿ 106 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿದೆ. “ನಾನು ಸರ್ಕಾರದಿಂದ ಹೊರಗುಳಿಯುತ್ತೇನೆ ಆದರೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ ನಂತರ ಪರ್ಯಾಯವಾಗಿ ಬರುತ್ತಿರುವ ಸರ್ಕಾರದ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುತ್ತೇನೆ” ಎಂದು ಫಡ್ನವೀಸ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶಿಂಧೆ, “ಹಿಂದಿನ ಸರ್ಕಾರದ ಕಳೆದ 30 ತಿಂಗಳುಗಳಿಂದ ಪ್ರಾಯೋಗಿಕವಾಗಿ ಸ್ಥಗಿತಗೊಂಡಿದ್ದ ರಾಜ್ಯದ ಪ್ರಗತಿ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡುವುದಾಗಿ” ಹೇಳಿದರು ಮತ್ತು ಬಹಹಾಸಾಹೇಬ್ ಠಾಕ್ರೆ ಅವರ ಹಿಂದುತ್ವದ ಆದರ್ಶಗಳನ್ನು ಅನುಸರಿಸುವುದಾಗಿ ಪುನರುಚ್ಚರಿಸಿದರು.
ತಮ್ಮ ಭವಿಷ್ಯದ ಸರ್ಕಾರವನ್ನು ಬೆಂಬಲಿಸುವಲ್ಲಿ ಬಿಜೆಪಿ ಮತ್ತು ಫಡ್ನವೀಸ್ ಅವರ ವಿಶಾಲ ಹೃದಯಕ್ಕಾಗಿ ಅವರು ಧನ್ಯವಾದ ಅರ್ಪಿಸಿದರು.




