ದೇಶದಲ್ಲಿ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳನ್ನು ಇದ್ದು ಮಾಡುವ ಕಾರ್ಯಕ್ಕೆ ಚುನಾವಣಾ ಆಯೋಗ ಈಗಾಗಲೇ ಮುಂದಾಗಿದೆ. ಈ ನಿಟ್ಟಿನಲ್ಲಿ ಆಯೋಗ ಡಾ. ಅಂಬೇಡ್ಕರ್ ಸಮಾಜವಾದಿ ಡೆಮಾಕ್ರಟಿಕ್ ಪಾರ್ಟಿಗೆ ನೋಟಿಸ್ ಜಾರಿಗೊಳಿಸಿದೆ.
ಆಯೋಗದಿಂದ ನೋಂದಾಯಿತ, ಮಾನ್ಯತೆ ಪಡೆಯದ ರಾಜಕೀಯ ಪಕ್ಷವು ಕಳೆದ 6 ವರ್ಷಗಳಿಂದ ಯಾವುದೇ ಲೋಕಸಭಾ ಚುನಾವಣೆ ಅಥವಾ ವಿಧಾನಸಭಾ ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರುವ ಹಾಗೂ ನೋಂದಾಯಿತ ವಿಳಾಸದಲ್ಲಿ ಪಕ್ಷವು ಕಾರ್ಯನಿರ್ವಹಿಸುತ್ತಿಲ್ಲದಿರುವುದನ್ನು ಪರಿಗಣಿಸಿ ಕ್ರಮ ಕೈಗೊಳ್ಳಲಾಗಿದೆ.
ಇಂತಹ ಪಕ್ಷಗಳನ್ನು ನೋಂದಾಯಿತ ರಾಜಕೀಯ ಪಕ್ಷಗಳ ಪಟ್ಟಿಯಿಂದ ಕೈಬಿಡುವ ಕುರಿತು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಪೂರ್ವದಲ್ಲಿ ಪಕ್ಷಕ್ಕೆ ಸಮಜಾಯಿಷಿ ನೀಡಲು ಅವಕಾಶ ಕಲ್ಪಿಸಿ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಆಯೋಗವು ತಿಳಿಸಿದೆ.
ಚುನಾವಣಾ ಆಯೋಗದ ನೋಟಿಸ್‌ಗಳಿಗೆ ಪ್ರತಿಯಾಗಿ, ಡಾ. ಅಂಬೇಡ್ಕರ್ ಸಮಾಜವಾದಿ ಡೆಮಾಕ್ರಟಿಕ್ ಪಾರ್ಟಿಯ ಮುಖಂಡರು ಆಯೋಗವನ್ನು ಸಂಪರ್ಕಿಸಿ, ಪಕ್ಷವನ್ನು ಮರುಜೀವಂತಗೊಳಿಸಲು ಸಮಯ ನೀಡಿ ಎಂದು ಮನವಿ ಮಾಡಿದ್ದಾರೆ.
ಅವರು ಮುಂದಿನ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತಯಾರಿ ನಡೆಸುತ್ತಿರುವುದಾಗಿ ಮತ್ತು ಪಕ್ಷದ ಕಚೇರಿಯನ್ನು ಹೊಸ ವಿಳಾಸಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆಯೋಗವು ಈ ಸ್ಪಷ್ಟನೆಗಳನ್ನು ಪರಿಶೀಲಿಸಿ ನಂತರದ ನಿರ್ಧಾರ ಕೈಗೊಳ್ಳಲಿದ್ದು, ಇತರ ನಿಯಮ ಉಲ್ಲಂಘನೆ ಮಾಡಿದ 100ಕ್ಕೂ ಹೆಚ್ಚು ರಾಜಕೀಯ ಪಕ್ಷಗಳ ವಿರುದ್ಧವೂ ಇದೇ ರೀತಿಯ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ