ಕಳೆದ ಹಲವು ತಿಂಗಳಿನಿಂದ ಮಂದಗತಿಯಲ್ಲಿದ್ದ ಗ್ರಾಹಕ ಉತ್ಪನ್ನಗಳ ಬೇಡಿಕೆ, ಅಕ್ಟೋಬರ್–ಡಿಸೆಂಬರ್ ತ್ರೈಮಾಸಿಕದಲ್ಲಿ ಸ್ಪಷ್ಟ ಚೇತರಿಕೆಯನ್ನು ಕಂಡಿದೆ. ಎಲೆಕ್ಟ್ರಾನಿಕ್ಸ್, ದಿನಸಿ, ಉಡುಪು, ಸೌಂದರ್ಯ ವರ್ಧಕಗಳು ಸೇರಿದಂತೆ ಜೀವನಶೈಲಿಯನ್ನು ಪ್ರತಿನಿಧಿಸುವ ಹಲವು ಉತ್ಪನ್ನಗಳ ಮಾರಾಟದಲ್ಲಿ ಏರಿಕೆ ದಾಖಲಾಗಿದೆ.
ಜಿಎಸ್‌ಟಿ ದರ ಕಡಿತ ಹಾಗೂ ಹಣದುಬ್ಬರದ ಪ್ರಮಾಣ ಇಳಿಕೆಯಾಗಿರುವುದು ಈ ಚೇತರಿಕೆಗೆ ಪ್ರಮುಖ ಕಾರಣವೆಂದು ಕೈಗಾರಿಕಾ ವಲಯ ವಿಶ್ಲೇಷಿಸಿದೆ. ಜಿಎಸ್‌ಟಿ ಕಡಿತದ ನಂತರ ಸತತ ಎರಡು ತ್ರೈಮಾಸಿಕಗಳಲ್ಲಿ ಕುಸಿತ ಕಂಡಿದ್ದ ಎಸಿ ಮತ್ತು ಟಿವಿ ಮಾರಾಟ ಶೇ.7–8ರಷ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ರೆಫ್ರಿಜರೇಟರ್‌ಗಳು ಹಾಗೂ ವಾಷಿಂಗ್ ಮೆಷಿನ್‌ಗಳ ಮಾರಾಟ ಪ್ರಮಾಣ ಶೇ.5–6ರಷ್ಟು ಬೆಳವಣಿಗೆ ದಾಖಲಿಸಿದೆ.
ಚಿಲ್ಲರೆ ಮಾರುಕಟ್ಟೆ ವಲಯದ ಈ ಬೆಳವಣಿಗೆ ಕಳೆದ ಒಂದೂವರೆ ವರ್ಷಗಳಲ್ಲೇ ಅತ್ಯಧಿಕವಾಗಿದೆ ಎಂದು ಕೈಗಾರಿಕಾ ಮೂಲಗಳು ತಿಳಿಸಿವೆ. ಕಳೆದ ಎರಡು ದುರ್ಬಲ ತ್ರೈಮಾಸಿಕಗಳ ಹಿನ್ನೆಲೆಯಲ್ಲಿ ಚಿಲ್ಲರೆ ವ್ಯಾಪಾರಿಗಳು ಎಚ್ಚರಿಕೆ ಮತ್ತು ಆತಂಕದಿಂದ ಮಾರುಕಟ್ಟೆ ಪರಿಸ್ಥಿತಿಯನ್ನು ಗಮನಿಸುತ್ತಿದ್ದರು. ಇದೀಗ ಮಾರಾಟ ಮತ್ತೆ ಚುರುಕುಗೊಳ್ಳುತ್ತಿದೆ ಎಂದು ಬ್ಲೂ ಸ್ಟಾರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಬಿ. ತ್ಯಾಗರಾಜನ್ ತಿಳಿಸಿದ್ದಾರೆ.
ಇದೇ ವೇಳೆ, ತ್ವರಿತವಾಗಿ ಮಾರಾಟವಾಗುವ ನಿತ್ಯೋಪಯೋಗಿ ಗ್ರಾಹಕ ಉತ್ಪನ್ನಗಳ ಮಾರಾಟದಲ್ಲಿಯೂ ಸುಧಾರಣೆ ಕಂಡುಬಂದಿದೆ. ಜಿಎಸ್‌ಟಿ 2.0 ಪರಿಣಾಮವಾಗಿ ಬೇಡಿಕೆ ಹೆಚ್ಚುತ್ತಿದೆ ಎಂದು ಡಾಬರ್ ಸೇರಿದಂತೆ ಹಲವು ಕಂಪನಿಗಳು ಅಭಿಪ್ರಾಯಪಟ್ಟಿವೆ.
ಅಕ್ಟೋಬರ್ 2025ರಲ್ಲಿ ವಿತರಕರು ಮತ್ತು ಚಿಲ್ಲರೆ ವ್ಯಾಪಾರಿಗಳು ಹೆಚ್ಚಿನ ಬೆಲೆಯ ದಾಸ್ತಾನುಗಳನ್ನು ವಿಲೇವಾರಿ ಮಾಡುವತ್ತ ಗಮನಹರಿಸಿದ್ದರು. ಮಾರುಕಟ್ಟೆ ಸ್ಥಿರೀಕರಣಗೊಂಡ ನಂತರ, ಗ್ರಾಮೀಣ ಪ್ರದೇಶಗಳ ಬೇಡಿಕೆ ನಗರ ಪ್ರದೇಶಗಳಿಗಿಂತ ಹೆಚ್ಚಾಗಿದೆ ಎಂದು ಹಲವಾರು ಕಂಪನಿಗಳು ಮಾಹಿತಿ ನೀಡಿವೆ.




