ಖಾಲಿ ಟ್ರಂಕ್ V/S #ಲೂಟೇಶಿ: ಡಿಕೆಶಿ-ಜೆಡಿಎಸ್ ಮಧ್ಯೆ ವಾಕ್ಸಮರ!

ಕರ್ನಾಟಕದ ರಾಜಕೀಯ ವೇದಿಕೆಯ ಮೇಲೆ ಮತ್ತೊಮ್ಮೆ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಜೆಡಿಎಸ್ JDS ನಡುವೆ ವಾಕ್ಸಮರ ಜೋರಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್, ಎಚ್.ಡಿ. ಕುಮಾರಸ್ವಾಮಿಯನ್ನು ಸಾರ್ವಜನಿಕರ ಮುಂದೆ ‘ಖಾಲಿ ಟ್ರಂಕ್’ ಎಂದು ಕರೆದಿದ್ದರು. ಈ ಹೇಳಿಕೆಗೆ ತಿರುಗೇಟಾಗಿ ಜೆಡಿಎಸ್ ಡಿಕೆಶಿಗೆ ಕೌಂಟರ್‌ ಅಟ್ಯಾಕ್ ಮಾಡಿದೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮತ್ತು ವೀಡಿಯೊ ಹಂಚಿಕೊಂಡು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ಅಧಿಕೃತ ಎಕ್ಸ್ ಖಾತೆಯಲ್ಲಿ ನೀಡಿದ ಪೋಸ್ಟ್‌ ಒಂದನ್ನ ಮಾಡಿದ್ದಾರೆ. ಹೌದಪ್ಪ ಹೌದು.. ಡಿಸಿಎಂ ಡಿಕೆಶಿ ಸಾಹೇಬರೇ, ಹೆಚ್.ಡಿ. ಕುಮಾರಸ್ವಾಮಿ ಅವರು ಖಾಲಿ ಟ್ರಂಕ್ ಅನ್ನೋದು ದಿಟವೇ. ಅವರದು ಖಾಲಿ ಕೈ, ತುಂಬಿದ ಹೃದಯ. ನಿಮ್ಮದು ಹಾಗಲ್ಲವಲ್ಲ. ಹೃದಯದ ತುಂಬಾ ಕಾರ್ಕೋಟಕ ವಿಷ.

ಕಂಡೋರ ಹಣವನ್ನು ಮತ್ತು ಬಡವರು, ದೀನದಲಿತರು, ದುರ್ಬಲರ ಭೂಮಿಯನ್ನು ಹೆದರಿಸಿ ಬೆದರಿಸಿ ಕಿತ್ತುಕೊಂಡು ತುಂಬಿಸಿಕೊಂಡ ಪಾಪದ ಟ್ರಂಕು. ಈ ಸತ್ಯ ನಿಮಗಷ್ಟೇ ಅಲ್ಲ, ಇಡೀ ನಾಡಿಗೆ, ದೇಶಕ್ಕೇ ತಿಳಿದ ಸತ್ಯ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ಮಿಸ್ಟರ್ #ಲೂಟೇಶಿ ಎಂದು ಬರೆದಿದ್ದಾರೆ.

ಪೋಸ್ಟ್ ಜೊತೆಗೆ ಹಂಚಿದ ವೀಡಿಯೊದಲ್ಲಿ ಡಿಕೆಶಿ ‘ಖಾಲಿ ಟ್ರಂಕ್’ ಎಂಬ ಹೇಳಿಕೆಗೆ ವ್ಯಂಗ್ಯ ಮಾಡಲಾಗಿದೆ. ಜೆಡಿಎಸ್ ಬೆಂಬಲಿಗರು ಈ ಪೋಸ್ಟ್‌ಗೆ ಭಾರೀ ಬೆಂಬಲ ತೋರಿಸುತ್ತಿದ್ದು, ಡಿಕೆಶಿ ಅವರ ಆಸ್ತಿ ಮತ್ತು ಭೂಮಿ ವಿವಾದಗಳನ್ನು ಉದ್ಧರಿಸಿ ಆರೋಪ ಮಾಡಲಾಗಿದೆ.

ಡಿ.ಕೆ. ಶಿವಕುಮಾರ್ ಕಾಂಗ್ರೆಸ್‌ನ ಪ್ರಮುಖ ನಾಯಕರೆಂದು ಗುರುತಿಸಲ್ಪಡುವವರಾಗಿದ್ದಾರೆ. ಅವರ ಮೇಲೆ ಭೂ ಕಬಳಿಕೆ ಮತ್ತು ಹಣದ ಆಸ್ತಿ ಕುರಿತ ಹಲವು ಆರೋಪಗಳಿವೆ. ಜೆಡಿಎಸ್ ಈ ವಿಷಯವನ್ನು ರಾಜಕೀಯ ಆಯುಧವಾಗಿ ಬಳಸಿಕೊಂಡಿದೆ. ಈ ಘಟನೆಯಿಂದ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ ಶುರುವಾಗಿದೆ. ಡಿಕೆಶಿ ಈ ತಿರುಗೇಟಿಗೆ ಮುಂದಿನ ದಿನಗಳಲ್ಲಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲವಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author