www.karnatakatv.net: ಅಫ್ಘಾನಿಸ್ತಾನವನ್ನು ಶತಾಯಗತಾಯ ವಶಕ್ಕೆ ಪಡೆಯಲೇಬೇಕು ಅಂತ ಟೊಂಕ ಕಟ್ಟಿ ನಿಂತಿರೋ ತಾಲಿಬಾನಿ ಉಗ್ರರು ತಮ್ಮ ಅಟ್ಟಹಾಸ ಮುಂದುವರಿಸಿದ್ದಾರೆ. ತಮ್ಮದೇ ರಾವಣ ರಾಜ್ಯ ಸ್ಥಾಪನೆಗೆ ಮುಂದಾಗಿರೋ ತಾಲೀಬಾನಿಗಳ ಕ್ರೌರ್ಯಕ್ಕೆ ಕೊನೆಯೇ ಇಲ್ಲದಂತಾಗಿದೆ.
ಅಫ್ಘಾನ್ ನಾಗರೀಕರು ಮತ್ತು ವಲಸಿಗರನ್ನು ಒಕ್ಕಲೆಬ್ಬಿಸಿ, ಕ್ರೌರ್ಯ ಮೆರೆಯುತ್ತಿರೋ ಉಗ್ರರು ಇದೀಗ ಪಂಜ್ ಶೀರ್ ಕಣಿವೆಯತ್ತ ಲಗ್ಗೆಯಿಟ್ಟಿದ್ದಾರೆ. ತಾಲಿಬಾನಿಗಳ ನಿಗ್ರಹಕ್ಕೆ ಇದಾಗಲೇ ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ವಿರೋಧಿ ಚಳುವಳಿ ನಡೆಯುತ್ತಿದ್ದು, ಉಗ್ರರ ಸದೆಬಡಿಯಲು ಮುನ್ನುಗ್ಗುತ್ತಿದ್ದಾರೆ. ಪರಿಣಾಮ, ತಾಲೀಬಾನಿಗಳ ವಿರುದ್ಧ ಸೆಣಸಾಡಿ ಅವರ ಕಪಿಮುಷ್ಟಿಯಲ್ಲಿದ್ದ ಸಾಲಾಹ್ ಮತ್ತು ಬಾನು ಜಿಲ್ಲೆಗಳನ್ನು ಪುನಃ ತಮ್ಮ ವಶಕ್ಕೆ ಪಡೆಯಲಾಗಿದೆ.
ಇನ್ನು ಪಂಜ್ ಶಿರ್ ಕಣಿವೆಯನ್ನು ಆಕ್ರಮಿಸಿಕೊಳ್ಳಲು ಯತ್ನಿಸಿದ ತಾಲಿಬಾನಿಗರ ಮೇಲೆ ಅಫ್ಘನ್ನರು ಗುಂಡಿನ ಸುರಿಮಳೆ ಗೈದಿದ್ದು ಸುಮಾರು 35ಕ್ಕೂ ಹೆಚ್ಚು ಮಂದಿ ತಾಲಿಬಾನಿ ಉಗ್ರರನ್ನು ಹೊಡೆದುರುಳಿಸಿ, 20 ಮಂದಿ ಉಗ್ರರ ಹೆಡೆಮುರಿಕಟ್ಟಿ ವಶಕ್ಕೆ ಪಡೆಯಲಾಗಿದೆ.
ಅಲ್ಲದೆ ಅಲ್ಲಿನ ಉಕ್ರೇನ್ ಪ್ರಜೆಗಳ ರಕ್ಷಣೆಗೆ ತೆರಳಿದ್ದ ವಿಮಾನವನ್ನೂ ಸಹ ತಾಲಿಬಾನಿಗಳು ಹೈಜಾಕ್ ಮಾಡಿದ್ದಾರೆ. ವಿಮಾನದಲ್ಲಿದ್ದ ಮಂದಿಯನ್ನ ತಾಲಿಬಾನ್ ಉಗ್ರರು ಇರಾನ್ ಗೆ ಕರೆದೊಯ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಬೂಲ್ ನಿಂದ ಉಕ್ರೇನ್ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.
ಒಟ್ಟಾರೆ ತಾಲಿಬಾನಿಯರ ಸ್ವಾರ್ಥದಿಂದಾಗಿ ಅಫ್ಘಾನಿಸ್ತಾನ ಇದೀಗ ಭೂಮಿ ಮೇಲಿನ ನರಕವಾಗಿ ಮಾರ್ಪಟ್ಟಿದ್ದು, ಅಲ್ಲಿ ಸಿಲುಕಿರೋ ಸಂತ್ರಸ್ತರು ತಮ್ಮ ಜೀವವನ್ನು ಅಂಗೈಲಿಡಿದು ಕ್ಷಣಕ್ಷಣವೂ ಜೀವಭಯದಲ್ಲಿ ಉಸಿರಾಡ್ತಿದ್ದಾರೆ.