ಬೆಂಗಳೂರು: ಸಚಿವ ಈಶ್ವರಪ್ಪ ವಿರುದ್ಧ 40% ಕಮೀಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆಯ ಹಿಂದೆ ಈಶ್ವರಪ್ಪರ ನೇರ ಕೈವಾಡವಿದೆ. ಸಂತೋಷ ಪಾಟೀಲ ತಮ್ಮ ವಾಟ್ಸ್‌ಅಪ್ ಸಂದೇಶದಲ್ಲೂ ಈಶ್ವರಪ್ಪರೇ ತಮ್ಮ ಸಾವಿಗೆ ಕಾರಣ ಎಂದು ಬರೆದುಕೊಂಡಿದ್ದಾರೆ. ಸಂತೋಷ್ ಸಾವಿಗೆ ಕಾರಣರಾದ ಈಶ್ವರಪ್ಪರನ್ನು ಪೊಲೀಸರು ಸೆಕ್ಷನ್ 306 ರ ಅಡಿ ಈ ಕೂಡಲೇ ಬಂಧಿಸಲಿ ಎಂಬುದಾಗಿ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ಭ್ರಷ್ಟ ಈಶ್ವರಪ್ಪರ ಬಂಡವಾಳ ಬಯಲು ಮಾಡಿದಕ್ಕಾಗಿ ಗುತ್ತಿಗೆದಾರ ಸಂತೋಷ್ ಪ್ರಾಣ ಕಳೆದುಕೊಳ್ಳುವಂತಾಗಿದೆ. ಸಂತೋಷ್ ಪಾಟೀಲ ಈಶ್ವರಪ್ಪ ವಿರುದ್ದ ಕಮೀಷನ್ ಆರೋಪ ಮಾಡಿದ್ದರೂ ಈ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಭ್ರಷ್ಟ ಈಶ್ವರಪ್ಪರ ಕಿರುಕುಳ ಹಾಗೂ ಬೆದರಿಕೆಯೇ ಸಂತೋಷ ಪಾಟೀಲ ಆತ್ಮಹತ್ಯೆಗೆ ಕಾರಣ. ಗುತ್ತಿಗೆದಾರನ ಸಾವಿಗೆ ಕಾರಣರಾದ ಈಶ್ವರಪ್ಪರನ್ನು ಸಂಪುಟದಿಂದ ಈ ಕೂಡಲೇ ವಜಾ ಮಾಡಲಿ ಎಂದಿದ್ದಾರೆ.
ಕೊಲೆಗಡುಕ ಮನಃಸ್ಥಿತಿಯ ಈಶ್ವರಪ್ಪ ಸಚಿವ ಸಂಪುಟದಲ್ಲಿರಲು ನೈತಿಕತೆಯೇ ಇಲ್ಲ. ಬೊಮ್ಮಾಯಿಯವರೆ “ಕೋಲೇ ಬಸವಣ್ಣ”ನ ರೀತಿ ತಲೆ ಆಡಿಸುವುದು ಬಿಡಿ, ಈಗಲಾದರೂ ದಿಟ್ಟ ಕ್ರಮ ತೆಗೆದುಕೊಳ್ಳಿ. ಈಶ್ವರಪ್ಪರನ್ನು ಕೆಳಗಿಳಿಸಿ ನಿಮ್ಮ ಸರ್ಕಾರಕ್ಕೆ ಅಂಟಿರೋ ಕಳಂಕ ಕಳಚಿಕೊಳ್ಳಿ. ಈಶ್ವರಪ್ಪರ ಭ್ರಷ್ಬಾಚಾರ ಬಯಲಿಗೆಳೆದ ಸಂತೋಷ್ ಪಾಟೀಲರ ಸಾವು ಅನೇಕ ಅನುಮಾನ ಹುಟ್ಟಿಸಿದೆ. ಆತ್ಮಹತ್ಯೆಯ ಬದಲು ಇಲ್ಲಿ ಕೊಲೆ ನಡೆದಿರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಪೊಲೀಸರು ಸಂತೋಷ್ ಪಾಟೀಲರ ಆತ್ಮಹತ್ಯೆ ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸಬೇಕು. ಈ ಸಾವಿನ ಹಿಂದಿರೋ ಈಶ್ವರಪ್ಪರ ಕೈವಾಡ ಬಯಲಾಗಲೇಬೇಕು ಎಂದು ಹೇಳಿದ್ದಾರೆ.




