Thursday, November 13, 2025

Latest Posts

50 ವರ್ಷ ಇದ್ರೂ ಬಾಡಿಗೆದಾರರು ಮನೆಯ ಮಾಲೀಕರಾಗಲು ಸಾಧ್ಯವಿಲ್ಲ!

- Advertisement -

ಭೂಮಾಲೀಕರ ಹಕ್ಕುಗಳನ್ನು ಬಲಪಡಿಸುವ ಮಹತ್ವದ ತೀರ್ಪೊಂದನ್ನು ಭಾರತದ ಸುಪ್ರೀಂ ಕೋರ್ಟ್ ನೀಡಿದೆ. ಬಾಡಿಗೆದಾರರು ಯಾವ ಸಂದರ್ಭದಲ್ಲಿಯೂ ತಮ್ಮ ವಾಸಿಸುವ ಮನೆಯನ್ನು, ಅದರ ಮಾಲೀಕತ್ವವನ್ನು ಪಡೆಯಲು ಸಾಧ್ಯವಿಲ್ಲ. 5 ವರ್ಷ ಅಲ್ಲ 50 ವರ್ಷಗಳಿಂದಲೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೂ ಆ ಆಸ್ತಿಯ ಮಾಲೀಕತ್ವವನ್ನು ಪಡೆಯಲು ಎಂದಿಗೂ ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದ್ದಾರೆ.

ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ನೀಡಿದ ಈ ತೀರ್ಪು, ಭೂಮಾಲೀಕರ ಹಕ್ಕುಗಳಿಗೆ ಬಲ ನೀಡುವ ಮತ್ತು ದೀರ್ಘಕಾಲದಿಂದ ನಡೆಯುತ್ತಿರುವ ಬಾಡಿಗೆದಾರ-ಮಾಲೀಕ ವಿವಾದಗಳಿಗೆ ಸ್ಪಷ್ಟ ದಾರಿ ತೋರಿಸುವ ನಿರ್ಣಯ ಎಂದು ಪರಿಗಣಿಸಲಾಗಿದೆ.

ಈ ಪ್ರಕರಣವು ದೆಹಲಿಯಲ್ಲಿ ಭೂಮಾಲೀಕರಾದ ಜ್ಯೋತಿ ಶರ್ಮಾ ಮತ್ತು ಬಾಡಿಗೆದಾರ ವಿಷ್ಣು ಗೋಯಲ್ ಇವರ ನಡುವಿನ ದೀರ್ಘಕಾಲದ ವಿವಾದಕ್ಕೆ ಸಂಬಂಧಿಸಿದೆ. 1980ರ ದಶಕದಿಂದ ವಿಷ್ಣು ಗೋಯಲ್ ಅವರು ಜ್ಯೋತಿ ಶರ್ಮಾ ಅವರ ಆಸ್ತಿಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು. ಸುಮಾರು 30 ವರ್ಷಗಳ ಕಾಲ ಅವರು ಯಾವುದೇ ಅಡಚಣೆ ಇಲ್ಲದೆ ಆ ಮನೆಯಲ್ಲಿ ವಾಸಿಸಿದ್ದರು. ನಂತರ ಅವರು ಬಾಡಿಗೆ ಪಾವತಿಯನ್ನು ನಿಲ್ಲಿಸಿ, ಪ್ರತಿಕೂಲ ಸ್ವಾಧೀನ ಸಿದ್ಧಾಂತದಡಿ ಆ ಆಸ್ತಿಯ ಮೇಲೆ ತಮ್ಮ ಹಕ್ಕು ಸ್ಥಾಪಿಸಲು ಪ್ರಯತ್ನಿಸಿದರು.

ಆದರೆ, ಭೂಮಾಲೀಕ ಜ್ಯೋತಿ ಶರ್ಮಾ ಅವರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ, ಆಸ್ತಿಯನ್ನು ತೆರವುಗೊಳಿಸುವಂತೆ ಬೇಡಿಕೆ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ, ಪ್ರಕರಣವು ಸುಪ್ರೀಂ ಕೋರ್ಟ್ ವರೆಗೆ ತಲುಪಿತು.
ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ, ಬಾಡಿಗೆದಾರನಿಗೆ ಆಸ್ತಿಯ ಮೇಲೆ ಕೇವಲ ಬಳಕೆಯ ಹಕ್ಕು ಮಾತ್ರ ಇದೆ. ಮಾಲೀಕತ್ವದ ಹಕ್ಕು ಎಂದಿಗೂ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ನ್ಯಾಯಾಲಯದ ಅಭಿಪ್ರಾಯದ ಪ್ರಕಾರ, ಬಾಡಿಗೆದಾರನು ಭೂಮಾಲೀಕರ ಅನುಮತಿ ಮತ್ತು ಒಪ್ಪಿಗೆಯ ಮೇರೆಗೆ ಆ ಜಾಗವನ್ನು ಉಪಯೋಗಿಸುತ್ತಾನೆ. ಆದ್ದರಿಂದ, ಅವನ ಹಕ್ಕು ಸೀಮಿತವಾಗಿರುತ್ತದೆ. ಕೋರ್ಟ್‌ ಈ ಪ್ರಕರಣದಲ್ಲಿ ಪ್ರತಿಕೂಲ ಸ್ವಾಧೀನದ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿ, ವಿಷ್ಣು ಗೋಯಲ್ ಅವರ ಹಕ್ಕು ಸ್ಥಾಪನೆ ಪ್ರಯತ್ನವನ್ನು ಅಸಾಧು ಎಂದು ಘೋಷಿಸಿದೆ.

ಈ ತೀರ್ಪು 1953ರ ಹಿಂದಿನ ಭೂಮಾಲೀಕ–ಬಾಡಿಗೆದಾರ ವಿವಾದಕ್ಕೂ ಅಂತ್ಯಗೊಳಿಸಿದಂತಾಗಿದೆ. ನ್ಯಾಯಮೂರ್ತಿಗಳ ಪೀಠವು ನೀಡಿದ ಈ ನಿರ್ಣಯವು ಆಸ್ತಿ ಮಾಲೀಕರಿಗೆ ದೊಡ್ಡ ಗೆಲುವು ಎಂದೇ ಪರಿಗಣಿಸಲಾಗಿದೆ. ಸುಪ್ರೀಂ ಕೋರ್ಟ್‌ನ ಈ ತೀರ್ಪಿನ ಮೂಲಕ, ಬಾಡಿಗೆದಾರರು ಎಷ್ಟೇ ವರ್ಷಗಳ ಕಾಲ ವಾಸಿಸಿದರೂ, ಆ ಆಸ್ತಿಯ ಮಾಲೀಕರಾಗಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಸ್ಪಷ್ಟವಾಗಿ ನೀಡಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss