ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಬಾರಿ ಪರಪ್ಪನ ಅಗ್ರಹಾರ ಜೈಲಿಗೆ ಸೇರಿರುವ ನಟ ದರ್ಶನ್‌ಗೆ ಈಗ ಒಂದರ ಮೇಲೊಂದು ಸಂಕಷ್ಟಗಳು ಎದುರಾಗುತ್ತಿವೆ. 82 ಲಕ್ಷ ರೂಪಾಯಿ ನಗದು ಬಗ್ಗೆ ಆದಾಯ ತೆರಿಗೆ ಇಲಾಖೆ ಈಗಾಗಲೇ ತನಿಖೆ ನಡೆಸುತ್ತಿರುವ ಹೊತ್ತಿನಲ್ಲೇ, ದರ್ಶನ್‌ನ ಆಪ್ತ ಪ್ರದೋಷ್ ನೀಡಿರುವ ಹೊಸ ಹೇಳಿಕೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಪ್ರದೋಷ್ ನಿವಾಸದಲ್ಲಿ ಐಟಿ ಅಧಿಕಾರಿಗಳು ಪತ್ತೆಹಚ್ಚಿದ 30 ಲಕ್ಷ ರೂಪಾಯಿಗಳ ಬಗ್ಗೆ ನೀಡಬೇಕಿದ್ದ ಸ್ಪಷ್ಟನೆ ಬದಲಾಗಿ, ಅವರು ಹಣದ ಸಂಪೂರ್ಣ ಜವಾಬ್ದಾರಿಯನ್ನು ತಳ್ಳಿಹಾಕಿದ್ದಾರೆ. “ಈ 30 ಲಕ್ಷ ನಗದು ನನ್ನದೂ ಅಲ್ಲ, ನನ್ನ ಕುಟುಂಬಕ್ಕೂ ಸೇರಿರುವುದಿಲ್ಲ” ಎಂದು ಪ್ರದೋಷ್ ಹೇಳಿರುವುದು ಐಟಿ ಇಲಾಖೆಯಲ್ಲಿ ಇನ್ನಷ್ಟು ಸಂಶಯ ಮೂಡಿಸಿದೆ. ಹಣದ ಮೂಲವನ್ನು ಬಹಿರಂಗಪಡಿಸಲು ಹಿಂದೇಟು ಹಾಕಿರುವುದರಿಂದ, ದರ್ಶನ್‌ನ್ನು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸಲು ಆದಾಯ ತೆರಿಗೆ ಇಲಾಖೆ ಸಜ್ಜಾಗಿದೆ.
ಐಟಿ ವಿಚಾರಣೆಯ ವೇಳೆ ಅಧಿಕಾರಿಗಳು “ಈ 30 ಲಕ್ಷದ ಮೂಲವನ್ನು ವಿವರಿಸಿ” ಎಂದು ಕೇಳಿದಾಗ, ಪ್ರದೋಷ್ ನನಗೆ ತಿಳಿದಿಲ್ಲ ಎಂದು ಉತ್ತರಿಸಿದ್ದಾರೆ. ಇನ್ನೊಂದು ಪ್ರಶ್ನೆಯಲ್ಲಿ, ವಿವರಣೆ ಸರಿ ಇರದಿದ್ದರೆ ಸಂಪೂರ್ಣ ಹಣವನ್ನು ವಶಪಡಿಸಿಕೊಂಡು ತೆರಿಗೆ ವಿಧಿಸಲಾಗುತ್ತದೆ, ನಿಮಗೆ ಆಕ್ಷೇಪವಿದೆಯೇ? ಎಂದು ಕೇಳಿದಾಗಲೂ, ಅವರು “ವಶಪಡಿಸಿಕೊಳ್ಳಬಹುದು, ನನಗೆ ಯಾವುದೇ ಆಕ್ಷೇಪವಿಲ್ಲ ಎಂದು ಹೇಳಿದ್ದಾರೆ. ಈ ನಿಲುವು ತನಿಖಾಧಿಕಾರಿಗಳನ್ನು ಹಣದ ಮೂಲದ ಕುರಿತು ಮತ್ತಷ್ಟು ಕಠಿಣ ತನಿಖೆಗೆ ಒಯ್ಯುತ್ತಿದೆ.
ಈಗಾಗಲೇ ದರ್ಶನ್ ಕೂಡ ಐಟಿ ಮುಂದೆ ಹಲವು ಹೇಳಿಕೆಗಳನ್ನು ನೀಡಿದ್ದಾರೆ. ಅವರು ತಮ್ಮ ಸ್ನೇಹಿತ ರಾಮ್ ಮೋಹನ್ ರಾಜ್‌ಗೆ 2024 ಫೆಬ್ರವರಿಯಲ್ಲಿ 40 ಲಕ್ಷ ಕೈಸಾಲ ನೀಡಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ. “25 ಲಕ್ಷ ಹಣ ಕೃಷಿಯಿಂದ ಬಂದ ಲಾಭ, 15 ಲಕ್ಷನ್ನು ಪ್ರಾಣಿಗಳ ಮಾರಾಟದಿಂದ ಪಡೆದಿದ್ದೇನೆ, ಉಳಿದಂತೆ ಅಭಿಮಾನಿಗಳು ಹುಟ್ಟುಹಬ್ಬಕ್ಕೆ ನೀಡಿದ ಉಡುಗೊರೆ ಹಣ” ಎಂದು ದರ್ಶನ್ ಸ್ಪಷ್ಟಪಡಿಸಿದ್ದರು. ಮನೆಯಲ್ಲಿ ಸಿಕ್ಕ 37 ಲಕ್ಷಕ್ಕೂ ಇದೇ ಮೂಲ ಎಂದು ಹೇಳಿದ್ದರು. ಆದರೆ, ಈ ಹಣಕ್ಕೆ ಯಾವುದೇ ದಾಖಲೆಗಳನ್ನು ತೋರಿಸಲು ಸಾಧ್ಯವಾಗಿಲ್ಲ ಎಂದು ಅವರು ಒಪ್ಪಿಕೊಂಡಿದ್ದರು.
ಈಗ ಪ್ರದೋಷ್ ನೀಡಿದ “30 ಲಕ್ಷ ನಮ್ಮದೂ ಅಲ್ಲ” ಎಂಬ ಹೇಳಿಕೆ, ದರ್ಶನ್‌ನ ಹಿಂದಿನ ಹೇಳಿಕೆಗಳೊಂದಿಗೆ ಹೊಂದಿಕೆಯಾಗದ ಕಾರಣ, ಹಣದ ನಿಜವಾದ ಮೂಲ ಕುರಿತು ಐಟಿ ಇಲಾಖೆ ಗಂಭೀರವಾಗಿ ವಿಶ್ಲೇಷಣೆ ನಡೆಸುತ್ತಿದೆ. ದರ್ಶನ್ ಮೇಲೆ ಒತ್ತಡ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಪ್ರಕರಣದಲ್ಲಿ ಹಣಕಾಸು ತನಿಖೆ ಮತ್ತೊಂದು ದೊಡ್ಡ ಆಯಾಮ ಪಡೆಯುವ ಸಾಧ್ಯತೆ ಇದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




