ಬೆಂಗಳೂರು ನಿವಾಸಿ, 32 ವರ್ಷದ ಮೇಘನಾ ಸಜ್ಜನರ್ ಅವರು, ನವದೆಹಲಿಯಲ್ಲಿ ನಡೆದ ಏಷ್ಯನ್ ಶೂಟಿಂಗ್ ಚಾಂಪಿಯನ್ಷಿಪ್ನ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇದಲ್ಲದೇ, ತಂಡ ವಿಭಾಗದಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಎಂಟು ತಿಂಗಳ ಗರ್ಭಿಣಿಯಾಗಿದ್ದರೂ ಅಂತಾರಾಷ್ಟ್ರೀಯ ಮಟ್ಟದ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಗೆದ್ದ ಮೇಘನಾ ಸಾಧನೆ ಜಾಗತಿಕ ಕ್ರೀಡಾ ವಲಯದಲ್ಲಿ ವಿಶೇಷ ಗಮನ ಸೆಳೆದಿದೆ. ಈ ಸಾಧನೆಗೆ ಭಾರತ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಸೇರಿದಂತೆ ಅನೇಕ ಕ್ರೀಡಾಪಟುಗಳು ಹಾಗೂ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಕಳೆದ ಆರು ತಿಂಗಳ ಅವಧಿಯಲ್ಲಿ ಮೇಘನಾ ಸಜ್ಜನರ್ಗೆ ಇದು ಮೂರನೇ ಅಂತಾರಾಷ್ಟ್ರೀಯ ಪದಕವಾಗಿದೆ. ಕಳೆದ ಸೆಪ್ಟೆಂಬರ್ನಲ್ಲಿ ಚೀನಾದಲ್ಲಿ ನಡೆದ ISSF ವಿಶ್ವಕಪ್ನಲ್ಲಿ ಕೂಡ ಅವರು ಕಂಚಿನ ಪದಕ ಗೆದ್ದಿದ್ದರು. ತಾಯಿ ಆಗುವ ಹೊಸ್ತಿಲಲ್ಲಿಯೇ ರಾಷ್ಟ್ರಕ್ಕಾಗಿ ಪದಕ ಗೆದ್ದು ಸ್ಪೂರ್ತಿ ಮೂಡಿಸಿರುವ ಕರುನಾಡ ಕ್ರೀಡಾಪಟು ಮೇಘನಾ ಸಜ್ಜನರ್ ಅವರ ಸಾಧನೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ವರದಿ : ಲಾವಣ್ಯ ಅನಿಗೋಳ




