ಮಹಾಶಿವರಾತ್ರಿ ಹಬ್ಬದ ಮುನ್ನ ರಾಜ್ಯ ರಾಜಕೀಯದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಹೊಸ ಚರ್ಚೆಗೆ ಕಾರಣವಾಗಿದೆ. ಶಿವರಾತ್ರಿಯ ನಂತರ ಎಲ್ಲವೂ ಶುಭವಾಗಲಿದೆ ಎಂಬ ಡಿಸಿಎಂ ಮಾತು ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸಿದೆ. ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್, ಜಾತ್ರಾಮಹೋತ್ಸವದ ಅಂಗವಾಗಿ ನೊಣವಿನಕೆರೆ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ದರ್ಶನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದೆ ಏನಾಗುತ್ತದೆ ಎಂಬುದರ ಬಗ್ಗೆ ಚರ್ಚಿಸುವುದಿಲ್ಲ. ಏನು ಮಾಡಬೇಕು ಎಂಬುದರ ಬಗ್ಗೆ ಮಾತ್ರ ಚಿಂತಿಸುತ್ತಿದ್ದೇನೆ. ಮಹಾಶಿವರಾತ್ರಿಯ ನಂತರ ಎಲ್ಲವೂ ಶುಭವಾಗಲಿದೆ, ಎಲ್ಲರಿಗೂ ಒಳ್ಳೆಯದಾಗಲಿದೆ ಎಂದು ಹೇಳಿದರು.
ಡಿಸಿಎಂ ಅವರು ಕಾಡು ಸಿದ್ದೇಶ್ವರ ಮಠದಲ್ಲಿ ವೀರ ಗಂಗಾಧರ ಅಜ್ಜಯ್ಯನ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಮಠಾಧಿಪತಿಗಳಾದ ಡಾ. ಕರಿವೃಷಭ ದೇಶೀಕೇಂದ್ರ ಸ್ವಾಮೀಜಿ ಅವರ ಆಶೀರ್ವಾದವನ್ನು ಪಡೆದರು. ಈ ವೇಳೆ ಸ್ವಾಮೀಜಿಗಳು ರುದ್ರಾಕ್ಷಿ ಮಾಲೆಯನ್ನು ಡಿಸಿಎಂ ಹಣೆಯ ಮೇಲೆ ಇಟ್ಟು ಪ್ರಾರ್ಥನೆ ನಡೆಸಿದರೆ, ಅಜ್ಜಯ್ಯನ ಮೂರ್ತಿಯನ್ನು ಡಿಸಿಎಂಗೆ ನೀಡಿದರು.
ಫೆ. 10 ಮಧ್ಯಾಹ್ನದ ನಂತರ ಡಿಕೆ ಶಿವಕುಮಾರ್ ದೆಹಲಿಗೆ ಪ್ರಯಾಣಿಸಿದ್ದರು.
ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ಮಿಕ್ಕಿದ್ದು ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ರಾಹುಲ್ ಗಾಂಧಿಯವರನ್ನು ಭೇಟಿಯಾದ ನಂತರ ಅವರ ಮುಖದಲ್ಲಿ ಹರ್ಷೋಲ್ಲಾಸ ಎದ್ದು ಕಾಣುತ್ತಿರೋದು ಮಾತ್ರ ಹೌದು.
ಇನ್ನು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬುದು ವೀರ ಗಂಗಾಧರ ಅಜ್ಜಯ್ಯನ ವಾಣಿಯಾಗಿದೆ. ಬೇಡುವಾಗ ಭಿಕ್ಷುಕನಾಗು, ಕೊಡುವಾಗ ದಾನಿಯಾಗು, ಬೇಡಿ ಕುಗ್ಗಬೇಡ, ಕೊಟ್ಟು ಕೊರಗಬೇಡ ಎಂಬ ಮಾತಿದೆ. ನಾನು ಡಿಸಿಎಂ ಆಗಿ ಅಲ್ಲ, ಮಠದ ಒಬ್ಬ ಭಕ್ತನಾಗಿ, ಶ್ರೀಗಳ ಶಿಷ್ಯನಾಗಿ, ಅಜ್ಜನ ಒಬ್ಬ ಅನುಯಾಯಿಯಾಗಿ ಸೇವೆ ಮಾಡುತ್ತಿದ್ದೇನೆ ಎಂದು ಡಿಕೆ ಶಿವಕುಮಾರ್, ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ವರದಿ : ಲಾವಣ್ಯ ಅನಿಗೋಳ




