Friday, September 12, 2025

Latest Posts

ಪ್ರೇಯಸಿಯ ಪ್ರೇಮಿಯನ್ನ ಹತ್ಯೆ ಮಾಡಿದ ‘ಮಾಜಿ ಲವ್ವರ್’!!!

- Advertisement -

ಪ್ರೀತಿ ಸಂಬಂಧಗಳ ಹಿನ್ನೆಲೆಯಲ್ಲಿ ಮೂಡಿದ ವಿವಾದವು ಕೊಲೆಯಲ್ಲಿ ಅಂತ್ಯಗೊಂಡಿದೆ. ಬೆಂಗಳೂರಿನ ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಯನಗರದಲ್ಲಿ ಈ ಘಟನೆ ನಡೆದಿದೆ. ಮಾಜಿ ಪ್ರೇಮಿಯ ಕಣ್ಣೆದುರು ಯುವಕನ ಎದೆಗೆ ಚಾಕು ಇರಿದು ಹತ್ಯೆ ಮಾಡಿರುವ ಭೀಕರ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.

ಮೃತ ಯುವಕನನ್ನು ಕಿರಣ್ ಎಂದು ಗುರುತಿಸಲಾಗಿದೆ. ಆರೋಪಿ ಯುವಕ ಜೀವನ್ ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದ ಯುವತಿ ದಿವ್ಯಾಳನ್ನು ಪೊಲೀಸರು ಬಂಧಿಸಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ, ದಿವ್ಯಾ ಮತ್ತು ಜೀವನ್ ಹಿಂದೆ ಪ್ರೀತಿಸುತ್ತಿದ್ದರು. ಆದರೆ, ಸಂಬಂಧ ವಿಚ್ಛೇದನೆಯಾದ ನಂತರ ದಿವ್ಯಾ, ಕಿರಣ್ ಎಂಬ ಇನ್ನೊಬ್ಬ ಯುವಕನೊಂದಿಗೆ ಪ್ರೀತಿಯಲ್ಲಿದ್ದರು. ಈ ಸಂಬಂಧವನ್ನು ದಿವ್ಯಾ ತನ್ನ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿದ್ದರು.

ಕಳೆದ ಮಂಗಳವಾರ, ಕಿರಣ್ ಜೊತೆ ಸೆಲ್ಫಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದ ದಿವ್ಯಾ, ಶೀಘ್ರದಲ್ಲೇ ಮದುವೆ ಎಂಬ ಕ್ಯಾಪ್ಶನ್ ಸಹ ಹಾಕಿದ್ದರು. ಇದನ್ನು ನೋಡಿದ ಜೀವನ್ ತೀವ್ರ ಕೋಪಗೊಂಡಿದ್ದ.

ಕೋಪಗೊಂಡ ಜೀವನ್, ದಿವ್ಯಾಳಿಗೆ ಕರೆ ಮಾಡಿ, ಅವಳು ಸಂಬಂಧದಲ್ಲಿದ್ದಾಗ ನೀಡಿದ ಎಲ್ಲಾ ಉಡುಗೊರೆಗಳನ್ನು ವಾಪಸ್ ಕೇಳಿದ್ದ. ಇದನ್ನು ದಿವ್ಯಾ ತನ್ನ ಪ್ರಸ್ತುತ ಪ್ರೇಮಿ ಕಿರಣ್‌ಗೆ ತಿಳಿಸಿದ್ದಳು. ನಂತರ, ಇಬ್ಬರೂ ಸೇರಿ ಉಡುಗೊರೆಗಳನ್ನು ಹಿಂತಿರುಗಿಸಲು, ಜೀವನ್‌ನ್ನು ಭೇಟಿಯಾಗಿ ವಿಚಾರ ಚರ್ಚೆ ನಡೆಸಲು ನಿರ್ಧರಿಸಿದ್ದರು.

ಜಯನಗರದ ಬೀದಿಯೊಂದರಲ್ಲಿ ಮೂವರು ಭೇಟಿಯಾಗಿದ್ರು. ಚರ್ಚೆ ವೇಳೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿತು. ಕೋಪದಿಂದ ಉಲ್ಬಣಗೊಂಡ ಜೀವನ್, ಮೊದಲೇ ತಂದಿದ್ದ ಚಾಕುವಿನಿಂದ ಕಿರಣ್ ಎದೆಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಘಟನೆ ನಡೆದ ಕೂಡಲೇ ಸ್ಥಳಕ್ಕೆ ತಿಲಕ್ ನಗರ ಪೊಲೀಸರು ಧಾವಿಸಿದ್ದಾರೆ. ಆರೋಪಿ ಜೀವನ್ ಮತ್ತು ಪ್ರಕರಣದಲ್ಲಿ ಭಾಗಿಯಾಗಿದ್ದ ದಿವ್ಯಾಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣವನ್ನು ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆ. ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss