delhi : ದೆಹಲಿಯಲ್ಲಿ ಬಿಜೆಪಿ ಈ ಬಾರಿ ಸ್ಪಷ್ಟ ಗೆಲುವು ಪಡೆದಿದೆ. ಬರೋಬ್ಬರಿ 27 ವರ್ಷಗಳ ಬಳಿಕ ಗದ್ದುಗೆ ಏರುತ್ತಿದೆ ಅನ್ನೋದು ವಿಶೇಷ. ಸದ್ಯ ದೆಹಲಿ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಶುರುವಾಗಿದೆ. ಬಹುಮತ ಪಡೆದರೂ, ಸಿಎಂ ಅಭ್ಯರ್ಥಿ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಹೀಗಾಗಿ ಸಿಎಂ ಯಾರು ಅನ್ನೋದು ಸದ್ಯಕ್ಕೆ ಇರುವ ಕುತೂಹಲ.
ಸದ್ಯ ಪಕ್ಷದಲ್ಲಿ ಸಿಎಂ ಯಾರು ಎಂಬ ಬಗ್ಗೆ ಗೌಪ್ಯ ಚರ್ಚೆ ನಡೆಯುತ್ತಿದೆಯಾದರೂ, ಅಂತಿಮವಾಗಿ ಪಕ್ಷದ ಹೈಕಮಾಂಡ್ ಸಿಎಂ ಯಾರು ಅನ್ನುವುದನ್ನು ತೀರ್ಮಾನಿಸಲಿದೆ.
ಸದ್ಯಕ್ಕೆ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಅವರ ಹೆಸರು ಚಾಲ್ತಿಯಲ್ಲಿದೆ. ಕಾರಣ, ಅವರು ಈ ಬಾರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ದೊಡ್ಡ ಗೆಲುವು ಸಾಧಿಸಿದ್ದಾರೆ. ಆದ್ದರಿಂದ ಸಹಜವಾಗಿಯೇ ಅವರ ಹೆಸರು ಸಿಎಂ ಸ್ಥಾನಕ್ಕೆ ಹತ್ತಿರವಾಗಿದೆ. ಹಾಗೆ ನೋಡಿದರೆ, ಪರ್ವೇಶ್ ಅವರು ಸ್ಪರ್ಧಿಸಿದ್ದ ಆ ಕ್ಷೇತ್ರ 70 ಕ್ಷೇತ್ರಗಳಲ್ಲೇ ಸಾಕಷ್ಟು ಕುತೂಹಲ ಕೆರಳಿಸಿತ್ತು. ಆ ಕ್ಷೇತ್ರದಲ್ಲಿ ಗೆದ್ದವರಿಗೆ ಉನ್ನತ ಸ್ಥಾನ ಖಾಯಂ ಎಂಬ ಮಾತು ಹಿಂದಿನಿಂದಲೂ ಇದೆ. ಈಗ ಅದೇ ಕ್ಷೇತ್ರದಲ್ಲಿ ಗೆದ್ದಿರುವ ಪರ್ವೇಶ್ ಅವರಿಗೂ ಕೂಡ ಮುಖ್ಯಮಂತ್ರಿ ಹುದ್ದೆ ದಕ್ಕಬಹುದು ಎಂದು ಹೇಳಲಾಗುತ್ತಿದೆ.
ಸದ್ಯ ಮುಖ್ಯಮಂತ್ರಿ ಸ್ಥಾನದ ರೇಸ್ ನಲ್ಲಿರುವ ಹಲವರ ಹೆಸರುಗಳ ಪೈಕಿ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಕೂಡ ಮುಂಚೂಣಿಯಲ್ಲಿದೆ. ಇವರು ಮಾಜಿ ಸಂಸದ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ. ಇನ್ನುಳಿದಂತೆ ವಿಜೇಂದರ್ ಗುಪ್ತಾ ಅವರ ಹೆಸರೂ ಓಡುತ್ತಿದೆ. ಇವರು ಹಿರಿಯ ಬಿಜೆಪಿ ನಾಯಕ ದಿಲ್ಲಿ ಬಿಜೆಪಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2015 ರಿಂದ ರೋಹಿಣಿ ಕ್ಷೇತ್ರದಿಂದ ಗೆಲುವು ಸಾಧಿಸುತ್ತಾ ಬಂದಿದ್ದಾರೆ. 2020 ರಲ್ಲಿ ಗೆದ್ದಿದ್ದ ಅವರು ಈ ವರ್ಷವೂ ಈ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ. ಗುಪ್ತಾ ದೆಹಲಿಯ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದು, ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ.
ಇವರ ಜೊತೆಗೆ ಮಂಜಿಂದರ್ ಸಿಂಗ್ ಸಿರ್ಸಾ, ಹರೇಶ್ ಖುರಾನ , ರಮೇಶ್ ಬಿಧುರಿ , ಬಾನ್ಸುರಿ ಸ್ವರಾಜ್ , ಸ್ಮೃತಿ ಇರಾನಿ , ದುಷ್ಯಂತ್ ಗೌತಮ್ ಸೇರಿದಂತೆ ಹಲವು ನಾಯಕರು ಕೂಡ ಇದೀಗ ಸಿಎಂ ರೇಸ್ ನಲ್ಲಿದ್ದಾರೆ. ಹೀಗಾಗಿ ದೆಹಲಿಯ ಸಿಎಂ ಯಾರಾಗ್ತಾರೆ ಎನ್ನುವ ಕುತೂಹಲ ಸದ್ಯಕ್ಕೆ ಹೆಚ್ಚಾಗಿದೆ.