ರಾಜ್ಯದ ಬಹುತೇಕ ಭಾಗಗಳಲ್ಲಿ ಚಳಿಯ ವಾತಾವರಣ ಮತ್ತು ಒಣ ಹವೆ ಮುಂದುವರಿದಿದೆ. ಉತ್ತರ ಒಳನಾಡಿನ ಕೆಲ ಪ್ರದೇಶಗಳಲ್ಲಿ ಮಳೆಯಾಗುವ ಸೂಚನೆ ಹವಾಮಾನ ಇಲಾಖೆ ನೀಡಿದೆ. ರಾಯಚೂರು, ಯಾದಗಿರಿ, ಕೊಪ್ಪಳ ಹಾಗೂ ಕಲಬುರಗಿ ಭಾಗದಲ್ಲಿ ಇಂದು ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಳ್ಳಾರಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ತುಮಕೂರು, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ಮೈಸೂರು, ಮಂಡ್ಯ, ಹಾಸನ, ಕೊಡಗು, ಕೋಲಾರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ ಹಾಗೂ ವಿಜಯನಗರ ಜಿಲ್ಲೆಗಳಲ್ಲಿಯೂ ಸಾಧಾರಣ ಮಳೆ ಸಾಧ್ಯತೆ ಇದೆ.
ರಾಜಧಾನಿ ಬೆಂಗಳೂರಿನಲ್ಲಿ ಬೆಳಿಗ್ಗೆ ಮೋಡ ಕವಿದ ವಾತಾವರಣ ವೀಕ್ಷಿಸಲ್ಪಡುವುದಾಗಿ ಇಲಾಖೆ ತಿಳಿಸಿದೆ. ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ.
ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದ್ದು, ಇತ್ತೀಚೆಗೆ ಬೀದರ್‌ನಲ್ಲಿ ಕನಿಷ್ಠ 10 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಕರಾವಳಿ ಹಾಗೂ ಉತ್ತರ ಭಾಗದ ಕೆಲವು ಜಿಲ್ಲೆಗಳಲ್ಲಿ 2ರಿಂದ 4 ಡಿಗ್ರಿ ತಾಪಮಾನ ಏರಿಳಿಕೆ ಕಂಡುಬಂದಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣೆ ಕೇಂದ್ರ ಪ್ರಕಟಿಸಿರುವ ವರದಿ ಪ್ರಕಾರ, ನವೆಂಬರ್ 1ರಿಂದ 17ರವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಒಟ್ಟು 26 ಜಿಲ್ಲೆಗಳು ಭಾರಿ ಮಳೆ ಕೊರತೆಯನ್ನು ದಾಖಲಿಸಿದ್ದರೆ, 3 ಜಿಲ್ಲೆಗಳಲ್ಲಿ ಸಾಮಾನ್ಯ ಕೊರತೆಯಿದೆ. ಕೇವಲ 2 ಜಿಲ್ಲೆಗಳಲ್ಲಿ ಮಾತ್ರ ನಿರೀಕ್ಷೆ ಮೀರಿ ಮಳೆಯಾಗಿದೆ. ಕಲಬುರಗಿಯಲ್ಲಿ ಅತಿರಿಕ್ತ ಮಳೆಯಾಗಿದ್ದು, ಯಾದಗಿರಿಯಲ್ಲಿಯೂ ಭಾರೀ ಮಳೆ ಸುರಿದಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

