ಬಾಂಗ್ಲಾದೇಶದಲ್ಲಿ 2024 ರ ಡಿಸೆಂಬರ್‌ನಿಂದ 2025 ರ ಜೂನ್‌ವರೆಗೆ ಹಿಂದೂ ಅಲ್ಪಸಂಖ್ಯಾತರ ಮೇಲೆ ಧರ್ಮನಿಂದನೆ ಆರೋಪದ ಆಧಾರದಲ್ಲಿ 71 ಹಲ್ಲೆ ಘಟನೆಗಳು ನಡೆದಿರುವುದಾಗಿ ವರದಿ ಬಂದಿದೆ. ಈ ಘಟನೆಗಳು ಬಾಂಗ್ಲಾದೇಶದ 30ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ದಾಖಲಾಗಿದ್ದು, ಹೆಚ್ಚಿನವು ಸುಳ್ಳು ಆರೋಪವಾಗಿವೆ ಎಂದು ಮಾನವ ಹಕ್ಕು ಸಂಸ್ಥೆ HRCBM ಹೇಳಿದೆ.
ಇತ್ತೀಚಿನ ದಿನಗಳಲ್ಲಿ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು ದಾಳಿ, ಹಿಂಸಾಚಾರಕ್ಕೆ ಒಳಗಾಗುವುದು ಸಾಮಾನ್ಯವಾಗಿದೆ. ವರದಿ ಪ್ರಕಾರ, ರಂಗಪುರ್, ಚಾಂದಪುರ್, ಚತ್ತೋಡಗ್ರಾಮ್, ದಿನಾಜ್‌ಪುರ್, ಸುನಾಮ್‌ಗಂಜ್, ಕಾಮಿಲ್ಲಾ, ಗಾಜಿಪುರ್, ತಾಂಗೇಲ್, ಸೇರಿದಂತೆ 30ಕ್ಕೂ ಹೆಚ್ಚು ಜಿಲ್ಲೆಗಳಲ್ಲಿಯೇ ಘಟನೆಗಳು ಸಂಭವಿಸಿದ್ದವು.
ಗಮನಾರ್ಹ ಅಂಶ ಎಂದರೆ ಅಲ್ಲೋ ಇಲ್ಲೋ ಕೆಲವೇ ಕಡೆ ಮಾತ್ರ ಇಂಥ ಘಟನೆಗಳು ನಡೆದಿಲ್ಲ. ಬದಲಾಗಿ, ಬಾಂಗ್ಲಾದೇಶದ ಹೆಚ್ಚಿನ ಪ್ರದೇಶಗಳಲ್ಲಿ, ಮತ್ತು ಬಾರಿ ಬಾರಿ ಈ ಹಲ್ಲೆ ಘಟನೆಗಳು ಸಂಭವಿಸಿವೆ. ಇದನ್ನು ಗಮನಿಸಿದಾಗ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಿಗೆ ಅಭದ್ರತೆಯ ಸ್ಥಿತಿ ಇರುವುದು ಕಾಣುತ್ತದೆ ಎಂಬುದು ಮಾನವ ಹಕ್ಕುಗಳ ಈ ವರದಿ ಹೇಳುತ್ತದೆ.
ಇತ್ತೀಚೆಗೆ ದೀಪ್ ಚಂದ್ರ ದಾಸ್ ಎಂಬ ಹಿಂದೂ ವ್ಯಕ್ತಿಯನ್ನು ಧರ್ಮನಿಂದನೆ ಆರೋಪದ ಮೇಲೆ ಹಲ್ಲೆ ಮಾಡಿ ಸಜೀವವಾಗಿ ಸುಟ್ಟುಹಾಕಿದ್ದರು. ಆದರೆ, ದೀಪು ಚಂದ್ರ ದಾಸ್ ಯಾವುದೇ ಧರ್ಮನಿಂದನೆ ಮಾಡಿಲ್ಲ ಎಂಬುದು ಬೆಳಕಿಗೆ ಬಂದಿತ್ತು. ಮಾನವ ಹಕ್ಕು ಆಯೋಗದ ವರದಿ ಕೂಡ ಅದು ತಿಳಿಸಿದ 71 ಪ್ರಕರಣಗಳಲ್ಲಿ ಹೆಚ್ಚಿನವುಗಳು ಸುಳ್ಳು ಆರೋಪವೇ ಆಗಿವೆ ಎಂದಿದೆ.
ಬಾಂಗ್ಲಾದೇಶೀ ಹಿಂದೂಗಳಿಗೆ ಮಲೇಷ್ಯನ್ ಸಂಸದರ ಬೆಂಬಲ
ದೀಪುಚಂದ್ರ ದಾಸ್ನನ್ನು ಸಜೀವವಾಗಿ ಸುಟ್ಟುಹಾಕಿದ ಪ್ರಕರಣವು ಮಲೇಷ್ಯಾ ಸಂಸತ್ನಲ್ಲಿ ಸದ್ದು ಮಾಡಿದೆ. ಅಲ್ಲಿಯ ಅನೇಕ ಸಂಸದರು ಬಾಂಗ್ಲಾದೇಶದ ಹಿಂದೂ ಸಮುದಾಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪಕ್ಷಾತೀತವಾಗಿ ಸಂಸದರು ಬೆಂಬಲ ಕೊಡುತ್ತಿದ್ದಾರೆ ಎಂದು ಸಂಸದ RSN ರಾಯರ್ ಅವರು ಹೇಳಿದ್ದಾರೆ. ಹಾಗೆಯೇ, ಬಾಂಗ್ಲಾದೇಶೀ ವೀಸಾ ನೀಡಲು ಮತ್ತು ಮಲೇಷ್ಯಾಗೆ ಬಾಂಗ್ಲಾದೇಶಿಗರ ಪ್ರವೇಶಕ್ಕೆ ನಿರ್ಬಂಧ ಏರುವುದು ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಅನೇಕ ಸಂಸದರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ ಎನ್ನಲಾಗಿದೆ.




