ಎಎಸ್‌ಪಿ ನಾರಾಯಣ ಬರಮನಿ ಅವರು ಸಿಎಂ ಸಿದ್ದರಾಮಯ್ಯ ಅವರ ಕೋಪಕ್ಕೆ ತುತ್ತಾಗಿದ್ದರು. ಮುಖ್ಯಮಂತ್ರಿಯಿಂದ ಸಾರ್ವಜನಿಕವಾಗಿ ಅವಮಾನಗೊಂಡ ನಂತರ ಸ್ವಯಂ ನಿವೃತ್ತಿ ಪಡೆಯುವ ಇಂಗಿತ ವ್ಯಕ್ತಪಡಿಸಿದ್ದರು. ಹಿರಿಯ ಪೊಲೀಸ್ ಅಧಿಕಾರಿ ನಾರಾಯಣ ಬರಮನಿ ಅವರು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ನಾರಾಯಣ ಬರಮನಿ ಅವರು ಧಾರವಾಡ ಎಎಸ್ಪಿಯಿಂದ ನೇರವಾಗಿ ಬೆಳಗಾವಿಯ ಕಾನೂನು ಸುವ್ಯವಸ್ಥೆಯ ಡಿಸಿಪಿಯಾಗಿ ಅವರ ವರ್ಗಾವಣೆಗೊಂಡಿದ್ದಾರೆ.
ಎಸ್‌ಪಿ ಕಚೇರಿ ಸಭಾಭವನದಲ್ಲಿ ಧಾರವಾಡ ಜಿಲ್ಲಾ ಪೋಲಿಸ್ ಇಲಾಖೆಯಿಂದ ಬಿಳ್ಕೋಡುಗೆ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಗೌರವ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕಳೆದ 33 ವರ್ಷಗಳಿಂದ ಖಾಕಿ ನನ್ನ ದೇವರು, ತಾಯಿಯಂತೆ ಗೌರವಿಸಿ, ಬದುಕಿದ್ದೇನೆ. ಯುವ ಅಧಿಕಾರಿಗಳು ವೃತ್ತಿಯ ಘನತೆ, ಗೌರವ ಎತ್ತಿ ಹಿಡಿಯುವಂತೆ ಸದಾ ಕಾಲ ಹೆಮ್ಮೆಯಿಂದ ಕರ್ತವ್ಯ ನಿರ್ವಹಿಸಬೇಕು.
ನಾವು ಕೆಲಸ ಮಾಡುವ ಇಲಾಖೆ, ಹುದ್ದೆಯ ಬಗ್ಗೆ ಯಾವಾಗಲೂ ನಿಷ್ಠೆ, ಹೆಮ್ಮೆ, ಅಭಿಮಾನ ಇರಬೇಕು. ಪೊಲೀಸ ಇಲಾಖೆಯ ಧ್ಯೇಯವಾದ ದುಷ್ಟರಿಗೆ ಶಿಕ್ಷೆ, ಶಿಷ್ಟರಿಗೆ ರಕ್ಷೆ ತರಹ ನಮ್ಮ ವೃತ್ತಿ ಬದುಕು ಇರಬೇಕು ಎಂದಿದ್ದಾರೆ. ಧಾರವಾಡದಿಂದ ನಿಮ್ಮೆಲ್ಲರ ಪ್ರೀತಿ, ವಿಶ್ವಾಸದ ಮೂಟೆ ಹೊತ್ತು ಹೊರಟಿದ್ದೇನೆ. ಧಾರವಾಡ ಜಿಲ್ಲೆ ಶಾಂತ, ಸುಂದರವಾಗಿದೆ. ಸಂಸ್ಕಾರ, ಸಂಸ್ಕೃತಿ ಇನ್ನೂ ಉಳಿದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಸರ್ಕಾರ ಡಿಸಿಪಿ ಮಾಡಿ ವರ್ಗಾವಣೆ ಆದೇಶ ಬಂದಿದೆ. ಬೆಳಗಾವಿ ಡಿಸಿಪಿ ಮಾಡಿ ಸರ್ಕಾರ ಆದೇಶ ಮಾಡಿದೆ. ಬೆಳಗಾವಿ ನಗರದ ಕಾನೂನು ಸುವ್ಯವಸ್ಥೆ ನಿರ್ವಹಣೆ ಮಾಡಲು ನನಗೆ ಅವಕಾಶ ನೀಡಿದೆ. ಅದರ ಕಡೆ ಗಮನ ಕೊಡ್ತೆನೆ . ಹಿರಿಯ ಅಧಿಕಾರಿಗಳ, ಎಲ್ಲರ ಸಲಹೆ ಸೂಚನೆ ಮೇರೆಗೆ ನಾನು ಕೆಲಸ ಮಾಡ್ತೆನೆ ಎಂದಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಅರ್ಯ ಅವರು ಮಾತನಾಡಿ, ನೂರು ಪುಸ್ತಕ ಹೇಳುವ ಸಾರವನ್ನು ಒಬ್ಬ ಹಿರಿಯ ಅಧಿಕಾರಿಯ ಅನುಭವದ ಮಾತುಗಳು ಹೇಳುತ್ತವೆ. ಹಿರಿಯ ಪೊಲೀಸ್ ಅಧಿಕಾರಿ ನಾರಾಯಣ ಬರಮನಿ ನಮ್ಮ ಪೊಲೀಸ ಇಲಾಖೆಯ ಹೆಮ್ಮೆಯ ಪುತ್ರ. ಅವರ ಸೇವೆ, ನಡುವಳಿಕೆ, ಕರ್ತವ್ಯ ನಿಷ್ಠೆ ಮತ್ತು ಕರ್ತವ್ಯ ಪ್ರಜ್ಞೆ ಎಲ್ಲರಿಗೂ ಮಾದರಿಯಾಗಿದೆ ಎಂದರು.